ವಿಶ್ವದಲ್ಲಿ ಮಾನವಜನಾಂಗ ವೈವಿಧ್ಯತೆಯಿಂದಲೂ ಹಾಗೂ ವೈಚಿತ್ರ್ಯದಗಳಿಂದಲೂ ಕೂಡಿದೆ.. ಆಯಾ ಜನಾಂಗದವರಿಗೆ ಅವರವರದೇ ಆದ ಧಾರ್ಮಿಕ ಆಚಾರ, ವಿಚಾರ ಮತ್ತು ಸಂಪ್ರದಾಯಗಳು. ಎಲ್ಲ ಧರ್ಮಗಳ ಮೂಲವೂ ಮಾನವನನ್ನು ವಿಶ್ವಮಾನವನನ್ನಾಗಿ ರೂಪಿಸುವುದೇ ಆಗಿದೆ. ಆಯಾ ಜನಾಂಗೀಯ ಪದ್ಧತಿಗಳು ಕಾಲಕಾಲಕ್ಕೆ ಮಾನವನ ಬದುಕಿಗೆ ಹೊಸಬೆಳಕು ಹೊಸತಿರುವು ನೀಡತ್ತಲೇ ಬೆರಗುಗೊಳಿಸಿವೆ. ಹಿಂದೂಧರ್ಮವು ಮಾನವೀಯ ನೆಲೆಯಲ್ಲೇ ವೈವಿಧ್ಯತೆಯಲ್ಲಿ ಐಕ್ಯತೆಯನ್ನೇ ಸಾರುತ್ತದೆ, ಸಾಂಪ್ರದಾಯಿಕ ಹಬ್ಬಗಳ ಆಚರಣೆಯಲ್ಲಿ ಸಹಬಾಳ್ವೆಯಿಂದ, ಸಂತೋಷ ಮತ್ತು ನೆಮ್ಮದಿಯನ್ನರಸಲು ಧರ್ಮಸೂಕ್ಷ್ಮವನ್ನು ತಿಳಿಸುತ್ತದೆ.
ಸನಾತನ ಧರ್ಮದಲ್ಲಿ ಆದಿ ಮಹರ್ಷಿಗಳ ಮಹತ್ವಾಕಾಂಕ್ಷೆಯೇ ಮನುಕುಲದ ಉದ್ಧಾರ. ಅವರು ತಮ್ಮ ದಿವ್ಯದೃಷ್ಟಿ ಮತ್ತು ದೂರದೃಷ್ಟಿಯಲ್ಲಿ ಗ್ರಹಗತಿ, ಋತುಮಾನ ಮತ್ತು ದೈವಾರಾಧನೆಯ ಸ್ವರೂಪಗಳಾಗಿ ಹಬ್ಬ ಹರಿದಿನ ವ್ರತನಿಯಮಗಳ ಸಾಂಪ್ರದಾಯಿಕ ಆಚರಣೆಗಳಲ್ಲಿ ಖಗೋಳಿಯ ನಿತ್ಯ ಸತ್ಯಗಳನ್ನು ನಿರೂಪಿಸಿ ಸಾದೃಶಗೊಳಿಸಿದ್ದಾರೆ. ಆದಕಾರಣ, ಮಾನವನಿಗೆ ಧರ್ಮಸೂಕ್ಷ್ಮಗಳಿವೆ. ಧರ್ಮಸೂಕ್ಷ್ಮಗಳೆಂದರೆ ಅಲೌಕಿತೆ ದೈವಿಕತೆಯಲ್ಲಿ ಕಂಡುಕೊಂಡ ಕಟುಸತ್ಯವೇ. ಅದು ಎಲ್ಲರಿಗೂ ಒಂದೇ. ಅದು ಏನೆಲ್ಲ ವೈಜ್ಞಾನಿಕತೆ ಆಧುನಿಕತೆಗಳಾಚೆ ಆಂತರಿಕ ಪ್ರಜ್ಞೆಯಲ್ಲಿರುತ್ತದೆ. ಯಾವೊಂದು ವಿಚಾರವೇ ಆಗಲಿ ಪ್ರಾಕೃತಿಕ ಮತ್ತು ಭೌತಿಕಜಗತ್ತಿನಿಂದ ಪ್ರೇರಿತವಾಗಿರುತ್ತದೆ ಯಾವುದು ಪರಿವೀಕ್ಷಣೆಯಲ್ಲಿ ಪ್ರಾಯೋಗಿಕವಾಗಿ ಅನುಭವಸಿದ್ಧವಾಗಿ ಪ್ರಾಮಾಣೀಕರಿಸಿದುದಷ್ಟೇ ಸಿದ್ಧಾಂತವಾಗಿರುತ್ತದೆ. ಹಾಗೇ ಆದಿಮಹರ್ಷಿಗಳು ಅಲೌಕಿ-ದೈವಿಕಶಕ್ತಿ ಸ್ವರೂಪಗಳನ್ನೂ ಆಂತರಿಕ ಪ್ರಜ್ಞೆಯಲ್ಲೇ ಶೋಧನೆಗೊಪಡಿಸಿದ್ದಾರೆ. ಮನುಷ್ಯ ಆಯಾ ಶಕ್ತಿಸ್ವರೂಪಕ್ಕೆ ವಿಧೇಯನಾಗಿ ಭಯ ಭಕ್ತಿ ತೋರಬೇಕೆಂಬುದನ್ನು ಧರ್ಮಸೂಕ್ಷ್ಮದಲ್ಲಿ ನಿರೂಪಿಸಿದ್ದಾರೆ. ಹಾಗೆ ಪ್ರಾಮಾಣೀಕರಿಸಿದವುಗಳೇ ಸಿದ್ಧಾಂತಗಳಾಗಿ ಶಾಸ್ತ್ರಗಳಾಗಿರುತ್ತವೆ. ಅಂತೆಯೇ, ಶತಶತಮಾನಗಳಿಂದ ಅನೂಚಾನವಾಗಿ ನಡೆದು ಬಂದಿರುವ ಹಬ್ಬ ಹರಿದಿನಗಳಲ್ಲಿ ಪೂಜಾವಿಧಿಗಳು ವ್ರತನೇಮ ಉಪವಾಸಾದಿಗಳು ಸಾಂಪ್ರದಾಯಿಕ ಆಚರಣೆಗಳೆಲ್ಲವೂ ಅಚಲ ನಂಬಿಕೆಗಳಾಗಿವೆ.
ಆದ್ದರಿಂದ, ಮನುಷ್ಯ ವಿಚಾರಂತನಾದರೆ ಮಾತ್ರ ಸಾಲದು; ಆಚಾರವಂತನೂ ಆಗಬೇಕು. ಆಚಾರದಲ್ಲಿ ಉತ್ತಮ ವಿಚಾರಗಳಿರಬೇಕು. ಉತ್ತಮ ವಿಚಾರಗಳೆಂದರೆ ಜೀವನದ ಮೂಲಧ್ಯೇಯ ಮತ್ತು ಉದ್ದೇಶಗಳು. ಜೀವನ ಕಾಲಕಾಲಕ್ಕೆ ಪರಿವರ್ತನಶೀಲವೇ ಸರಿ. ಪರಿವರ್ತನೆಯಲ್ಲಿ ಪುರೋಗಾಮಿತ್ವದ ಪ್ರಗತಿಯಿರಬೇಕು. ತಿರೋಗಾಮಿಯಾದರೆ, ತಾನು ಹುಟ್ಟಿಬಂದ ಜನಾಂಗ ಪರಿಸರದ ಸಂಪ್ರದಾಯಗಳಿಗೆ ಬೆನ್ನುಹಾಕಿ ನಡೆದರೆ ಜೀವನವು ದ್ವಂದ್ವಾರ್ಥಗಳಿಂದ ಗೊಂದಲಗಳ ಗೂಡಾಗುತ್ತದೆ. ಸ್ವಾಮಿ ವಿವೇಕಾನಂದರು ಭಕ್ತಿಮಾರ್ಗದ ಇನ್ನೊಂದು ಮುಖವೇ ಜ್ಞಾನಮಾರ್ಗ ವೆನ್ನುತ್ತಾರೆ. ಯಾಕೆಂದರೆ, ಜ್ಞಾನಮಾರ್ಗದಲ್ಲಿ ಯಾವೊಂದು ಗೊಂದಲವಿಲ್ಲದಿರುವ ಸ್ಥಾಯೀಭಾವವಿದೆ. ಅದನ್ನು ಸಾಂಪ್ರದಾಯಿಕ ಆಚರಣೆಗಳಲ್ಲಿ ತಿಳಿಸಿಕೊಡುವುದೇ ಹಬ್ಬ ಹರಿದಿಗಳು.
ಮಾನವಧರ್ಮ ಸೂಕ್ಷ್ಮದ ಅಧಿಪತಿ ಗಣಪತಿ
ಒಂದು ಕಾಲಕ್ಕೆ ವೇದಶಾಸ್ತ್ರ ಶೃತಿಸೂತ್ರಗಳ ಪಾರಾಯಣಕ್ಕೆ ಸೀಮಿತವಾದ ಸಂಪ್ರದಾಯಿಕ ಆಚರಣೆಗಳೆಲ್ಲ ಜನಸಾಮಾನ್ಯರಿಗೆಟುಕದೇ ಅತಿಕ್ಷಿಷ್ಟಕರವೆನಿಸಿದ್ದವು. ವೇದಶಾಸ್ತ್ರಗಳೆಂದರೇನೆಂದು ತಿಳಿಯದೇ ಸತ್ವಗುಣಸಾಧಕರಾಗಿ ಸಿದ್ಧಿ ಪಡೆದ ಮಹಾನ್ ಯೋಗೀಶ್ವರರೂ ಇದ್ದರು. ಆದುದರಿಂದ ಬ್ರಹ್ಮನ ವಾಙ್ಞಯ ರೂಪದ ವೇದಗಳನ್ನು ಲಿಖಿತರೂಪಕ್ಕೆ ತಂದ ವೇದವ್ಯಾಸರು ಜನಸಾಮಾನ್ಯರಿಗೂ ಅರ್ಥವಾಗುವಂತೆ ಪುರಾಣಗಳನ್ನು ಬರೆದರು. ಅಂತೆಯೇ, ಪುರಾಣಕಥೆಗಳ ಮೂಲಕ ವಿವಿಧ ದೈವೀಶಕ್ತಿಗಳ ಆರಾಧನೆಯಲ್ಲಿ ಹಿರಿಯರು ನಡೆಸಿಕೊಂಡುಬಂದ ಸಂಪ್ರದಾಯಗಳಲ್ಲಿ ಹಬ್ಬ ಹರಿದಿನಗಳ ಆಚರಣೆಗಳು. ಅವುಗಳಲ್ಲಿ, ಜಪ,ತಪ, ಧ್ಯಾನ, ಪ್ರಾರ್ಥನೆ, ಭಜನೆ ಫೂಜೆ ವ್ರತಗಳು. ಹಬ್ಬಗಳ ಆಚರಣೆಯಲ್ಲಿ ಅವರವರ ಶಕ್ತ್ಯಾನುಸಾರ ಭಗವಂತನನ್ನು ಆರಾಧಿಸುವುದೇ ಆಗಿದೆ ಎಂದು ಪುರಾಣಗಳಲ್ಲಿ ಸಾರಿದ್ದಾರೆ.
ಆದ್ದರಿಂದ, ಹಬ್ಬಗಳ ಆಚರಣೆಯಲ್ಲಿ ಅಲೌಕಿ ದೈವೀಶಕ್ತಿ ಸ್ವರೂಪವನ್ನು ಭಯಭಕ್ತಿಯಿಂದ ಪೂಜಿಸಿ ಒಲಿಸಿಕೊಳ್ಳುವುದೇ ಮೂಲೋದ್ಧೇಶ. ಜನಸಾಮಾನ್ಯರೂ ಸರಳ ಪೂಜಾಪದ್ಧತಿಗಳಿಂದ ದೈವಾನುಗ್ರಹ ಪಡೆದು ಸಂತಾನಫಲ, ಸುಖ-ಶಾಂತಿ ಮತ್ತು ಸಂಪತ್ತುಗಳನ್ನು ಹೊಂದಬಹುದು. ಆದುದರಿಂದ, ಹಬ್ಬಗಳೆಂದರೆ, ವಿಶೇ಼ಷಭೋಜನ ಮಾಡಿ ಸಂಭ್ರಮಿಸುವುದಷ್ಡೇ ಅಲ್ಲ, ನಮ್ಮ ಹಿರಿಯರು ಹಾಕಿಕೊಟ್ಟ ಪರಂಪರಾಗತ ಸಂಪ್ರದಾಯಿಕ ಆಚರಣೆಯಲ್ಲಿರುವ ಅರ್ಥವನ್ನು ಗ್ರಹಿಸಿ ದೈವೀಶಕ್ತಿಸ್ವರೂಪಗಳಿಗೆ ಶರಣಾರ್ಥಿಗಳಾಗುವುದು. ನಮ್ಮ ರಾಷ್ಟ್ರಕವಿ ಕುವೆಂಪು ನುಡಿದಂತೆ- “ತನುವು ನಿನ್ನದು ಮನವು ನಿನ್ನದು| ಎನ್ನ ಜೀವನ ಧನವು ನಿನ್ನದು| ನಾನು ನಿನ್ನವನೆಂಬ ಹೆಮ್ಮೆಯ ಋಣವು ಮಾತ್ರವೆ ನನ್ನದು|”
ಎಲ್ಲ ದೈವೀಶಕ್ತಿ ಸ್ವರೂಪಗಳಲ್ಲಿ ಪ್ರಮುಖನಾಗಿದ್ದಾನೆ ಗಜಮುಖ. ಅವನಿಗೆ ಅಗ್ರಪೂಜೆ. ವಿಶ್ವಜೀವನದ ಬಹುರಾಷ್ಟ್ರಗಳಲ್ಲಿ ಗಣಪತಿ ಹಬ್ಬ ಪ್ರಾಮುಖ್ಯತೆ ಪಡೆದಿದೆ. ಅಮೆರಿಕದ ರೆಡ್ ಇಂಡಿಯನ್ ಜನಾಂಗೀಯದಲ್ಲಿ, ಮೆಕ್ಸಿಕೋದ ನಿವಾಸಿಗಳು ಗಣಪತಿಯನ್ನು ಹೋಲುವ ದೇವತಾಮೂರ್ತಿಯನ್ನು ಪೂಜಿಸುತ್ತಾರೆ. ದಕ್ಷಿಣ ಏಷಿಯಾ ದೇಶಗಳಲ್ಲಂತೂ ಗಣೇಶನ ಆರಾಧನೆ ಹೆಚ್ಚಾಗಿ ಆಚರಣೆಯಲ್ಲಿದೆ. ಜಾವಾ, ಬಾಲಿ, ಸುಮಾತ್ರಗಳಲ್ಲಿ ಮತ್ತು ಮುಸ್ಮಿಂ ರಾಷ್ಟ್ರವಾದ ಇಂಡೋನೇಷಿಯಾದಲ್ಲಿ(ಇಂದಿಗೂ ನೋಟಿನ ಮೇಲೆ ಗಣೇಶನ ಚಿತ್ರವನ್ನು ಮುದ್ದಿಸುತ್ತಾರೆ, ಥಾಯ್ ಲೆಂಡಿನಲ್ಲಿ ಗಣೇಶನ ಆರಾಧನೆ ಇದೆ. ಹಿಂದೆ ಚೋಳರ ಆಡಳ್ವಿಕೆ ದಕ್ಷಿಣ ಏಷಿಯಾದತ್ತ ವ್ಯಾಪಿಸಿತ್ತು ಎನ್ನುವುದಕ್ಕೆ ಇಲ್ಲಿ ಪುರಾವೆಗಳಿವೆ. ಜೈನರಲ್ಲಿ ಗಣೇಶ ಆರಾಧನೆ ಸರ್ವೇಸಾಮಾನ್ಯವಾಗಿದೆ. ಅವರ ವ್ಯವಹಾರೀಕ ದಿನಚರಿ ಆರಂಭವಾಗುವುದೇ ಗಣೇಶನನ್ನು ಸ್ತುತಿಸುವುದರಿಂದ. ಬೌದ್ಧರಲ್ಲಿ ಗಣೇಶ ಬುದ್ಧಿಪ್ರದ. ಜಪಾನ್ ದೇಶದ ಕೆಲ ಬೌದ್ಧ ದೇವಾಲಯಗಳಲ್ಲಿ ಗಣೇಶನ ಮೂರ್ತಿಗಳಿವೆ. ಜಪಾನ್ ನ ಕಾಂಗಿ ಬೌದ್ಧರಲ್ಲಿ ಗಣೇಶನ ಆರಾಧನೆ ಇದೆ. ಹೀಗೆ ವಿಶ್ವಜೀವನದಲ್ಲಿ ಸರ್ವಧರ್ಮ ಪೂಜಿತ ಸುಮುಖ ಗಣಪನಾಗಿದ್ದಾನೆ. ಶ್ರೀ ಗಜಮುಖ ಸೌಖ್ಯದಾತ| ಲೋಕಾದೀಶ ಸತತವು ನಮಿಪೆವು ಶ್ರೀ|| ಎಂಬ ಗೀತೆ ನಮ್ಮಲ್ಲಿದೆ.
ವೇದೋಕ್ತವಾಗಿ ಗಣಪತಿ ಎಂದರೆ ಅಖಿಲಾಂಡ ಕೋಟಿ ಬ್ರಹ್ಮಾಂಡದ ಗಣನಾಯಕ. ಗಣಗಳೆಂದರೆ ಮನುಷ್ಯಗಣ, ಪ್ರಾಣಿಪಕ್ಷಿಗಳಗಣ, ಸಸ್ಯ, ಹುಲ್ಲುಗರಿಕೆ, ವನ ವೃಕ್ಷಗಳಗಣ, ಸೌರಮಂಡಲದ ಭೂಮಿ ಮತ್ತು ಸಕಲಗ್ರಹಗಳು ಇವುಗಳೆಲ್ಲವೂ ಸೇರಿ ಚರಾಚರ ಜಗತ್ತು ನಿರ್ವಿಘ್ನವಾಗಿ ನಿರಂತರ ಚಲನೆಯಲ್ಲಿರಬೇಕಲ್ಲ. ಅವುಗಳ ಅಧಿನಾಯಕನೇ ಮಹಾಗಣಪತಿ. “ ಮೂಷಿಕವಾಹನ ಮೋದಕ ಹಸ್ತಾ... ಎಂದು ಆರಂಭವಾಗುವ ಗೀತೆ ಕೇಳಿದ್ದೇವೆ- ಮೋದಕ ಎಂದರೆ ಸದಾಕಾಲವೂ ಆನಂದ ಉಂಟುಮಾಡುವ ಪದಾರ್ಥ ಎಂದರ್ಥವೆನ್ನುತ್ತಾರೆ. ಆದುದರಿಂದಲೇ ಗಣಪತಿಗೆ ಮೋದಕ ಭಕ್ಷ್ಯವಿಶೇಷವೆಂದರೆ ಇಷ್ಟವಂತೆ. ಚತುರ್ಥಿಯಂದು ಗಣಪತಿಗೆ ವಿಶೇಷವಾಗಿ ಶ್ರದ್ಧಾಭಕ್ತಿಯಿಂದ ಪೂಜೆ ಮಾಡಿ ಮೋದಕಭಕ್ಷ್ಯವನ್ನು ನೈವೇದ್ಯಮಾಡಿ ಆನಂತರ ಅದನ್ನು ಪ್ರಸಾದವಾಗಿ ಸ್ವೀಕರಿಸುವುದರಿಂದ ಇಂದ್ರಿಯ ಸಂಪ್ರೀತಿ ಪ್ರಾಪ್ತವಾಗುವುದಲ್ಲದೇ, ನಾವು ಜೀವಾತ್ಮನಲ್ಲಿ ಪರಮಾತ್ಮನ ಪ್ರಸನ್ನಃತೆಯನ್ನೇ ಕಂಡುಕೊಳ್ಳಬಹುದೆಂಬ ನಂಬಿಕೆಯಿದೆ.