Monday, July 4, 2011

ಹರಿಕಥಾ ಕೀರ್ತನ ಕಲೆ

ಅದು ಹದಿನೈದನೇ ಶತಮಾನದ ಕಾಲ. ಪತ್ರಿಕೆ ವ್ಯವಸಾಯ ಗೊತ್ತಿರದ ಮಧ್ಯಯುಗ. ಅಂದಿನಿಂದಲೂ ದೇಶದಾದ್ಯಂತ ಹಳ್ಳಿಗಳಿಂದ ಪಟ್ಟಣಗಳವರೆಗೆ ಆ ಬಾಲವೃದ್ಧರಾದಿಯಾಗಿ ಪಂಡಿತ ಪಾಮರರಿಗೆ ಸಮಸ್ತ ಸಾಮಾನ್ಯ ಜನತೆಗೆ ತತ್ವಬೋಧನೆ, ಮನೋರಂಜನೆ, ಮಾತುಗಾರಿಕೆ, ಕುಣಿತ ನರ್ತನಗಳಿಂದ ಸಂಮೋಹಿನಿಯೆನಿಸುವ ಹಾಗೇ ಏಕಮೇವ ಸಾಮಾಜಿಕ ಸಂಪರ್ಕ ಸಾಧನ ಹರಿಕಥೆಯೇ ಆಗಿತ್ತು.

ಜ್ಞಾನದಿಂದಲೇ ಕರ್ಮಫಲ ಸಾಫಲ್ಯವು. ತತ್ವಜ್ಞರಾದ ಗುರುಗಳಿಗೆ ಶರಣಾಗುವುದರಿಂದಲೇ ತಿಳಿವಿನ ಹರಿವು ವಿಸ್ತರಿಸುವುದು. ಗುರುವಿನ ಉಪದೇಶದಿಂದಲೇ ಶ್ರವಣ ಆರಂಭವಾಗುವುದು.
ಶ್ರವಣದಿಂದ ಜ್ಞಾನ. ಜ್ಞಾನದಿಂದ ಮನಕಾನಂದ.
ಆತ್ಮಾನಂದದಿಂದ ಮುಕ್ತ ಮನಸ್ಸು ಪ್ರಫುಲ್ಲಗೊಂಡಾಗ ಮೋಕ್ಷಕ್ಕೆ ಮಾರ್ಗ.
ಕೀರ್ತನ ಕಾರರು ಭಕ್ತಿಮಾರ್ಗದಿಂದ ಜ್ಞಾನಮಾರ್ಗದತ್ತ ಕೊಂಡೊಯ್ಯುವವರು. ಅವರು ತಮ್ಮ ದಾಸರ ಪದಗಳಲ್ಲಿ ಜನತೆಯನ್ನು ಚಿಂತನೆಗೆ ಹಚ್ಚಿದರು.

ಹರಿಕಥಾ ಕೀರ್ತನಕಾರರೋ ತಮ್ಮ ಪುರಾಣ ಕಥನ ಪ್ರವಚನಗಳಿಂದ ಕಥನಕಲೆಯ ಮೂಲಕ ಕಣ್ಣಿಗೆ ಕಟ್ಟುವಂತೆ ಹಾಡುತ್ತಾ ಬಣ್ಣಿಸುತ್ತ ಸಣ್ಣ ಪುಟ್ಟ ದೃಷ್ಟಾಂತಗಳಲ್ಲಿ ಪಂಡಿತರನ್ನು ಮಾತ್ರವಲ್ಲದೇ ಪಾಮರರನ್ನೂ ಭಕ್ತಿಭಾವದಿಂದ ತಲ್ಲೀನರಾಗುವಂತೆ ಮಾಡಿ, ಅವರಲ್ಲಿ ತತ್ವಾರ್ಥಚಿಂತನದಿಂದ ಸಮಾಜಿಕ ಬದಲಾವಣೆ ಮತ್ತು ಕಾಲಕಾಲಕ್ಕೆ ಸುಧಾರಣೆಯನ್ನುಂಟು ಮಾಡಿದವರು.
ಹರಿದಾಸರು ಕಥಾ ಪ್ರಾರಂಭಕ್ಕೆ ಮೊದಲು ನೆರೆದ ಶೋತೃಗಳಿಂದ ಸಾಮೂಹಿಕ ಸಂಕೀರ್ತನೆ ಹೇಳಿಸುತ್ತಿದ್ದರು-
ಲಕ್ಷ್ಮೀ ರಮಣ ಗೋವಿಂದಾ ಗೋವಿಂದ| ಆಂಜನೇಯವರದ ಗೋವಿಂದಾ ಗೋವಿಂದ||
ಸಖಸಂತನಕಿ ಜೈ| ಸದ್ಗುರು ಮಹಾರಾಜ್ ಕಿ ಜೈ||

ಇದು ಶೋತೃಗಳಲ್ಲಿ ದೈವಭಕ್ತಿ ಮತ್ತು ಸಾಮೂಹಿಕ ಶರಣಾಗತಿಯನ್ನು ಜಾಗೃತಗೊಳಿಸುವುದೇ ಆಗಿತ್ತು.
ನನ್ನ ಬಾಲ್ಯವೆಲ್ಲ ಕಳೆದದ್ದು ಭದ್ರಾವತಿಯ ಹಳೇ ನಗರದಲ್ಲಿ. ಅಲ್ಲಿ ಭದ್ರಾ ನದಿಯ ದಡದಲ್ಲಿ ರಾಮದೇವರು, ಸುಬ್ರಹ್ಮಣ್ಯಸ್ವಾಮಿ ಮತ್ತು ರಾಘವೇಂದ್ರ ಸ್ವಾಮಿಗಳ ಮಠದ ಸಮೀಪವೇ ಇತ್ತು ನಮ್ಮ ಮನೆ. ನಾನು ಗೋಲಿ, ಗಿಲ್ಲಿದಾಂಡು ಆಟವಾಡಿ, ಭಕ್ತಿ ಗೀತೆ, ಚಲನ ಚಿತ್ರಗೀತೆಗಳನ್ನು ಮನಸೋಇಚ್ಛೆ ಹಾಡಿಕೊಳ್ಳುತ್ತ ಕುಣಿದು ಕುಪ್ಪಳಿಸುತ್ತಿದ್ದ ಬಾಲ್ಯದ ಸವಿ ನೆನಪನ್ನು ಸದಾ ಕೆದಕುವ ಮನೆ ಅದು.
ಸಂಜೆಯಾಗುತ್ತಿದ್ದಂತೆ ಕೈಕಾಲು ಮುಖ ತೊಳೆದುಕೊಂಡು ಮನೆಯೊಳಗೆ ಬರಬೇಕು. ದೇವರ ನಾಮ ಸ್ತೋತ್ರ ಅಮ್ಮ ತಪ್ಪಿದರೆ ಅಕ್ಕ ಹೇಳಿಕೊಡಬೇಕು. ನಾನು ತಮ್ಮ ತಂಗಿಯರೊಂದಿಗೆ ಒಟ್ಟಿಗೇ ಕುಳಿತು ಹೇಳುವುದು ರೂಢಿಗತವಾಗಿತ್ತು.

ಅದು ಅಂದಿನ ಶ್ರಣ ಮನನದ ಕಾಲ. ಇದು ಇಂದಿನ ದೃಶ್ಯ ಮನೋಹರ ಅಲ್ಲಲ್ಲ ಹನನದ ಕಾಲ. ಭಕ್ತಿಮಾರ್ಗದ ಇನ್ನೊಂದು ಮುಖವೇ ಜ್ಞಾನಮಾರ್ಗವೆಂದು ನಮಗೆ ಸದಾ ಸ್ಮೃತಿಯಲ್ಲುಳಿವಂತೆ ಮಾಡಿದ ಕಾಲವದು. ಆಗ ಶ್ರಾವಣಮಾಸ ಬಂತೆಂದರೆ ಸಾಕು, ನಮ್ಮ ಮನೆಯ ಎದುರಿಗೇ ಇದ್ದ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಪ್ರತಿನಿತ್ಯ ಸಂಜೆ ಹರಿಕಥಾ ಕಾಲಕ್ಷೇಪವಿರುತ್ತಿತ್ತು. ಶ್ರಾವಣದಲ್ಲಿ ಆರಂಭವಾದದ್ದು ಕಾರ್ತೀಕ ಮಾಸ ಮುಗಿಯುವವರೆಗೂ ತಿಂಗಳಾನುಗಟ್ಟಲೆ ರಾಮಾಯಣ ಮತ್ತು ಮಹಾಭಾರತ ಹರಿಥೆಗಳಾಗಿ ಕಿಕ್ಕಿರಿದು ನೆರೆಯುತ್ತಿದ್ದ ಶೋತೃಗಳನ್ನು ರಂಜಿಸುತ್ತಿದ್ದವು; ಎಂಥವರಿಗೂ ಮನ:ಶ್ಯಾಂತಿ ಸಮಾಧಾನ ತಂದುಕೊಡುತ್ತಿದ್ದವು.
ಹರಿಕಥಾ ಕಾಲಕ್ಷೇಪ ನಡೆಸಿಕೊಡಲು ಕೀರ್ತನ ಕಾರರನ್ನು ಮೈಸೂರು, ಬೆಂಗಳೂರುಗಳಿಂದ ಮಾತ್ರವಲ್ಲದೇ ಆಂಧ್ರ ಮತ್ತು ಮದ್ರಾಸಿನಿಂದಲೂ ಕರೆಸುತ್ತಿದ್ದುದುಂಟು.

ಏನೇ ಆಗಲಿ ಆ ಕಾಲದ ಭಾವನೆಗಳೇ ಬೇರೆ...ಯಾಕೆಂದರೆ, ನನಗೆ ನೆನಪಿರುವಂತೆ ರಾಘವೇಂದ್ರ ಸ್ವಾಮಿ ಮಠದ ಮುಂಭಾಗದಲ್ಲಿ ಹಾಕಿದ ಚಪ್ಪರದಲ್ಲಿ ದಾಸರು ನಿಂತು ಕಥಾಕಾಲಕ್ಷೇಪವನ್ನು ಆರಂಭಿಸುತ್ತಿದ್ದರು. ಆ ದೊಡ್ಡ ಚಪ್ಪರದಲ್ಲಿ ಬಲಕ್ಕೆ ಹೆಂಗಸರಿಗೆ ಸ್ಥಳ ಕಾದಿರಿಸಲಾಗಿದ್ದರೆ, ಎಡಕ್ಕೆ ಗಂಡಸರಿಗೆ. ಚಿಕ್ಕ ಪುಟ್ಟ ಮಕ್ಕಳಿಗೆ ದಾಸರ ಮಂದೇನೇ ಪಕ್ಕವಾದ್ಯ ನುಡಿಸುವವರ ಹತ್ತಿರವೇ ಎನ್ನಬೇಕು. ಆಶ್ಚರ್ಯವೆಂದರೆ, ನಾವು ಮಕ್ಕಳೂ ಗಲಾಟೆ ಮಾಡದೇನೆ ಸುಮಾರು ಒಂದೂವರೆ ಗಂಟೆ ತದೇಕಚಿತ್ತದಿಂದ ರಾಮಾಯಣ ಅಥವಾ ಮಹಭಾರತ ಮುಂತಾದ ಪುರಾಣ ಕಥೆಗಳನ್ನು ಕೇಳುತ್ತಿದ್ದುದು. ಅವು ಇಂದಿನ ಟಿ.ವಿ.ಧಾರಾವಾಹಿಗಳಿಗಿಂತಲೂ ನಯನ ಮನೋಹರವಾಗಿದ್ದವೆಂದರೆ ಉತ್ಪ್ರೇಕ್ಷಯೇನಿಲ್ಲ. (ಪ್ರಾಯಶಃ ರಾಮಾನಂದ ಸಾಗರ್ ರವರ ರಾಮಾಯಣ ಮತ್ತು ಬಿ.ಆರ್ ಚೋಪ್ರಾ ಅವರ ಮಹಾಭಾರತವನ್ನು ಹೊರತು ಪಡಿಸಿದರೆ).

ದಾಸರುಗಳಿಂದ ಹರಿಕಥಾ ಪ್ರಸಂಗ ನಡೆಯುತ್ತಿರುವ ಸಂದರ್ಭದಲ್ಲಿ, ಸಾವಿರಾರು ಶೋತೃಗಳು ತನ್ಮಯರಾಗಿ ಕೇಳುತ್ತಿದ್ದರೆ, ಪಶುಗಳೂ ಅವರೊಡನೆ ಭಾಗಿಗಳಾಗುತ್ತಿದ್ದವೆಂದರೆ ಅತಿಶಯೋಕ್ತಿಯಲ್ಲ. ಅದಕ್ಕೆ ಉದಾಹರಣೆಯಾಗಿ ಹೇಳಬೇಕೆಂದರೆ- ಅಂದು ರಾಮಾಯಣ ಕಥಾ ಕಾಲಕ್ಷೇಪ ನಡೆಯುತ್ತಿರುವಾಗ ಸೊಂಪಾಗಿ ಮೈತುಂಬಿಕೊಂಡಿದ್ದ ಬಿಳಿ ಹಸುವೊಂದು ಸ್ಥಳಕ್ಕೆ ಆಗಮಿಸುತ್ತಿತ್ತು. ಅದಕ್ಕೆ ಯಾವಾಗಲೂ ಮಕ್ಕಳ ಸಮೀಪ ಅಂದರೆ ದಾಸರ ಮುಂಭಾಗದ ಸೀಟು ರಿಸರ್ವ್ ಆಗಿರುತ್ತಿತ್ತೆಂದರೆ ನೀವು ಆಶ್ಚರ್ಯ ಪಡುತ್ತೀರಿ. ಹಾದು, ಒಂದೊಮ್ಮೆ ಲೇಟಾಗಿ ಬಂತೆಂದರೆ ಸುಮ್ಮನೆ ಧಾವಿಸಿ ಮುನ್ನುಗ್ಗಿ ಬರುತ್ತಿತ್ತು. ಮುಂದಿರುವ ಅದರ ಜಾಗವನ್ನು ಯಾರೇ ಆಕ್ರಮಿಕೊಂಡಿರಲ್ಲಿ ತಟ್ಟನೆ ಎದ್ದು ಅದಕ್ಕೆ ಕುಳಿತುಕೊಳ್ಳಲು ಅನುವು ಮಾಡಿಕೊಡುವುದು ರೂಢಿಯೇ ಆಗಿಹೋಗಿತ್ತು. ಹೊಸ ಶೋತೃಗಳೇನಾದರೂ ಎದ್ದು ಗಾಬರಿಬಿದ್ದರೆ ದಾಸರು "ಹೆದರ ಬೇಡಿ ಕುಳಿತುಕೊಳ್ಳಿ" ಎಂದು ಧೈರ್ಯ ಹೇಳುತ್ತಿದ್ದರು.

ದಾಸರಾದರೋ ಅದು ಬಂತೆಂದರೆ, ತಮ್ಮ ಪಕ್ಕವಾದ್ಯದ ಮೂಲಕ ವಿಶೇಷ ಸ್ವಾಗತ ನೀಡುತ್ತಿದ್ದರು. ಆ ಗೋವು ಅಂದಿನ ಕಥೆ ಮುಗಿಯುವವರೆಗೆ ಏನೂ ಗಲೀಜು ಮಾಡದೇ ಮೆಲುಕುಹಾಕುತ್ತ ಪ್ರಧಾನ ಶೋತೃಗಳಲ್ಲಿ ಪ್ರಥಮಸ್ಥಾನ ಪಡೆದಿರುತ್ತಿತ್ತು. ಕಥಾಕಾಲಕ್ಷೇಪ ಮುಗಿದು ದಾಸರು,
ಶರಣರ ಸುರಭೂಜ ಗುರುರಾಜ... ಕಾಮಿತಾರ್ಥಗಳ ಕಾಮಧೇನುವಿನ ತೀಮವೀರಿ ಕೊಡುವೋ ಮಗರಾಜ ಎಂದು ಮಂಗಳ ಹಾಡುತ್ತಿದ್ದಂತೆಯೆ ಆ ಗೋವೂ ಕೂಡ ತಟ್ಟನೆದ್ದು ನಿಲ್ಲುತ್ತಿತ್ತು. ಎಲ್ಲರೊಂದಿಗೆ ತಾನೂ ಹಿಂದಿರುಗಿ ಹೋಗುತ್ತಿದ್ದುದು, ಆ ಸಂದರ್ಭ ಸನ್ನಿವೇಶಗಳೆಲ್ಲವೂ ಇಂದಿಗೂ ನನ್ನ ಕಣ್ ಕಟ್ಟಿದಂತೇ ಇದೆ
Post a Comment