Wednesday, November 23, 2016

ದೈವೀಶಕ್ತಿ ಸ್ವರೂಪಗಳಲ್ಲಿ ಪ್ರಮುಖ ಗಜಮುಖ


ವಿಶ್ವದಲ್ಲಿ ಮಾನವಜನಾಂಗ ವೈವಿಧ್ಯತೆಯಿಂದಲೂ ಹಾಗೂ ವೈಚಿತ್ರ್ಯದಗಳಿಂದಲೂ ಕೂಡಿದೆ.. ಆಯಾ ಜನಾಂಗದವರಿಗೆ ಅವರವರದೇ ಆದ ಧಾರ್ಮಿಕ ಆಚಾರ, ವಿಚಾರ ಮತ್ತು ಸಂಪ್ರದಾಯಗಳು. ಎಲ್ಲ ಧರ್ಮಗಳ ಮೂಲವೂ ಮಾನವನನ್ನು ವಿಶ್ವಮಾನವನನ್ನಾಗಿ ರೂಪಿಸುವುದೇ ಆಗಿದೆ. ಆಯಾ ಜನಾಂಗೀಯ ಪದ್ಧತಿಗಳು ಕಾಲಕಾಲಕ್ಕೆ ಮಾನವನ ಬದುಕಿಗೆ ಹೊಸಬೆಳಕು ಹೊಸತಿರುವು ನೀಡತ್ತಲೇ ಬೆರಗುಗೊಳಿಸಿವೆ. ಹಿಂದೂಧರ್ಮವು ಮಾನವೀಯ ನೆಲೆಯಲ್ಲೇ ವೈವಿಧ್ಯತೆಯಲ್ಲಿ ಐಕ್ಯತೆಯನ್ನೇ ಸಾರುತ್ತದೆ, ಸಾಂಪ್ರದಾಯಿಕ ಹಬ್ಬಗಳ ಆಚರಣೆಯಲ್ಲಿ ಸಹಬಾಳ್ವೆಯಿಂದ, ಸಂತೋಷ ಮತ್ತು ನೆಮ್ಮದಿಯನ್ನರಸಲು ಧರ್ಮಸೂಕ್ಷ್ಮವನ್ನು ತಿಳಿಸುತ್ತದೆ.
ಸನಾತನ ಧರ್ಮದಲ್ಲಿ ಆದಿ ಮಹರ್ಷಿಗಳ ಮಹತ್ವಾಕಾಂಕ್ಷೆಯೇ ಮನುಕುಲದ ಉದ್ಧಾರ. ಅವರು ತಮ್ಮ ದಿವ್ಯದೃಷ್ಟಿ ಮತ್ತು ದೂರದೃಷ್ಟಿಯಲ್ಲಿ ಗ್ರಹಗತಿ, ಋತುಮಾನ ಮತ್ತು ದೈವಾರಾಧನೆಯ ಸ್ವರೂಪಗಳಾಗಿ ಹಬ್ಬ ಹರಿದಿನ ವ್ರತನಿಯಮಗಳ ಸಾಂಪ್ರದಾಯಿಕ ಆಚರಣೆಗಳಲ್ಲಿ ಖಗೋಳಿಯ ನಿತ್ಯ ಸತ್ಯಗಳನ್ನು ನಿರೂಪಿಸಿ ಸಾದೃಶಗೊಳಿಸಿದ್ದಾರೆ. ಆದಕಾರಣ, ಮಾನವನಿಗೆ ಧರ್ಮಸೂಕ್ಷ್ಮಗಳಿವೆ. ಧರ್ಮಸೂಕ್ಷ್ಮಗಳೆಂದರೆ ಅಲೌಕಿತೆ ದೈವಿಕತೆಯಲ್ಲಿ ಕಂಡುಕೊಂಡ ಕಟುಸತ್ಯವೇ. ಅದು ಎಲ್ಲರಿಗೂ ಒಂದೇ. ಅದು ಏನೆಲ್ಲ ವೈಜ್ಞಾನಿಕತೆ ಆಧುನಿಕತೆಗಳಾಚೆ ಆಂತರಿಕ ಪ್ರಜ್ಞೆಯಲ್ಲಿರುತ್ತದೆ. ಯಾವೊಂದು ವಿಚಾರವೇ ಆಗಲಿ ಪ್ರಾಕೃತಿಕ ಮತ್ತು ಭೌತಿಕಜಗತ್ತಿನಿಂದ ಪ್ರೇರಿತವಾಗಿರುತ್ತದೆ ಯಾವುದು ಪರಿವೀಕ್ಷಣೆಯಲ್ಲಿ ಪ್ರಾಯೋಗಿಕವಾಗಿ ಅನುಭವಸಿದ್ಧವಾಗಿ ಪ್ರಾಮಾಣೀಕರಿಸಿದುದಷ್ಟೇ ಸಿದ್ಧಾಂತವಾಗಿರುತ್ತದೆ. ಹಾಗೇ ಆದಿಮಹರ್ಷಿಗಳು ಅಲೌಕಿ-ದೈವಿಕಶಕ್ತಿ ಸ್ವರೂಪಗಳನ್ನೂ ಆಂತರಿಕ ಪ್ರಜ್ಞೆಯಲ್ಲೇ ಶೋಧನೆಗೊಪಡಿಸಿದ್ದಾರೆ. ಮನುಷ್ಯ ಆಯಾ ಶಕ್ತಿಸ್ವರೂಪಕ್ಕೆ ವಿಧೇಯನಾಗಿ ಭಯ ಭಕ್ತಿ ತೋರಬೇಕೆಂಬುದನ್ನು ಧರ್ಮಸೂಕ್ಷ್ಮದಲ್ಲಿ ನಿರೂಪಿಸಿದ್ದಾರೆ. ಹಾಗೆ ಪ್ರಾಮಾಣೀಕರಿಸಿದವುಗಳೇ ಸಿದ್ಧಾಂತಗಳಾಗಿ ಶಾಸ್ತ್ರಗಳಾಗಿರುತ್ತವೆ. ಅಂತೆಯೇ, ಶತಶತಮಾನಗಳಿಂದ ಅನೂಚಾನವಾಗಿ ನಡೆದು ಬಂದಿರುವ ಹಬ್ಬ ಹರಿದಿನಗಳಲ್ಲಿ ಪೂಜಾವಿಧಿಗಳು ವ್ರತನೇಮ ಉಪವಾಸಾದಿಗಳು ಸಾಂಪ್ರದಾಯಿಕ ಆಚರಣೆಗಳೆಲ್ಲವೂ ಅಚಲ ನಂಬಿಕೆಗಳಾಗಿವೆ.

ಆದ್ದರಿಂದ, ಮನುಷ್ಯ ವಿಚಾರಂತನಾದರೆ ಮಾತ್ರ ಸಾಲದು; ಆಚಾರವಂತನೂ ಆಗಬೇಕು. ಆಚಾರದಲ್ಲಿ ಉತ್ತಮ ವಿಚಾರಗಳಿರಬೇಕು. ಉತ್ತಮ ವಿಚಾರಗಳೆಂದರೆ ಜೀವನದ ಮೂಲಧ್ಯೇಯ ಮತ್ತು ಉದ್ದೇಶಗಳು. ಜೀವನ ಕಾಲಕಾಲಕ್ಕೆ ಪರಿವರ್ತನಶೀಲವೇ ಸರಿ. ಪರಿವರ್ತನೆಯಲ್ಲಿ ಪುರೋಗಾಮಿತ್ವದ ಪ್ರಗತಿಯಿರಬೇಕು. ತಿರೋಗಾಮಿಯಾದರೆ, ತಾನು ಹುಟ್ಟಿಬಂದ ಜನಾಂಗ ಪರಿಸರದ ಸಂಪ್ರದಾಯಗಳಿಗೆ ಬೆನ್ನುಹಾಕಿ ನಡೆದರೆ ಜೀವನವು ದ್ವಂದ್ವಾರ್ಥಗಳಿಂದ ಗೊಂದಲಗಳ ಗೂಡಾಗುತ್ತದೆ. ಸ್ವಾಮಿ ವಿವೇಕಾನಂದರು ಭಕ್ತಿಮಾರ್ಗದ ಇನ್ನೊಂದು ಮುಖವೇ ಜ್ಞಾನಮಾರ್ಗ ವೆನ್ನುತ್ತಾರೆ. ಯಾಕೆಂದರೆ, ಜ್ಞಾನಮಾರ್ಗದಲ್ಲಿ ಯಾವೊಂದು ಗೊಂದಲವಿಲ್ಲದಿರುವ ಸ್ಥಾಯೀಭಾವವಿದೆ. ಅದನ್ನು ಸಾಂಪ್ರದಾಯಿಕ ಆಚರಣೆಗಳಲ್ಲಿ ತಿಳಿಸಿಕೊಡುವುದೇ ಹಬ್ಬ ಹರಿದಿಗಳು.


ಮಾನವಧರ್ಮ ಸೂಕ್ಷ್ಮದ ಅಧಿಪತಿ ಗಣಪತಿ

ಒಂದು ಕಾಲಕ್ಕೆ ವೇದಶಾಸ್ತ್ರ ಶೃತಿಸೂತ್ರಗಳ ಪಾರಾಯಣಕ್ಕೆ ಸೀಮಿತವಾದ ಸಂಪ್ರದಾಯಿಕ ಆಚರಣೆಗಳೆಲ್ಲ ಜನಸಾಮಾನ್ಯರಿಗೆಟುಕದೇ ಅತಿಕ್ಷಿಷ್ಟಕರವೆನಿಸಿದ್ದವು. ವೇದಶಾಸ್ತ್ರಗಳೆಂದರೇನೆಂದು ತಿಳಿಯದೇ ಸತ್ವಗುಣಸಾಧಕರಾಗಿ ಸಿದ್ಧಿ ಪಡೆದ ಮಹಾನ್ ಯೋಗೀಶ್ವರರೂ ಇದ್ದರು. ಆದುದರಿಂದ ಬ್ರಹ್ಮನ ವಾಙ್ಞಯ ರೂಪದ ವೇದಗಳನ್ನು ಲಿಖಿತರೂಪಕ್ಕೆ ತಂದ ವೇದವ್ಯಾಸರು ಜನಸಾಮಾನ್ಯರಿಗೂ ಅರ್ಥವಾಗುವಂತೆ ಪುರಾಣಗಳನ್ನು ಬರೆದರು. ಅಂತೆಯೇ, ಪುರಾಣಕಥೆಗಳ ಮೂಲಕ ವಿವಿಧ ದೈವೀಶಕ್ತಿಗಳ ಆರಾಧನೆಯಲ್ಲಿ ಹಿರಿಯರು ನಡೆಸಿಕೊಂಡುಬಂದ ಸಂಪ್ರದಾಯಗಳಲ್ಲಿ ಹಬ್ಬ ಹರಿದಿನಗಳ ಆಚರಣೆಗಳು. ಅವುಗಳಲ್ಲಿ, ಜಪ,ತಪ, ಧ್ಯಾನ, ಪ್ರಾರ್ಥನೆ, ಭಜನೆ ಫೂಜೆ ವ್ರತಗಳು. ಹಬ್ಬಗಳ ಆಚರಣೆಯಲ್ಲಿ ಅವರವರ ಶಕ್ತ್ಯಾನುಸಾರ ಭಗವಂತನನ್ನು ಆರಾಧಿಸುವುದೇ ಆಗಿದೆ ಎಂದು ಪುರಾಣಗಳಲ್ಲಿ ಸಾರಿದ್ದಾರೆ.

ಆದ್ದರಿಂದ, ಹಬ್ಬಗಳ ಆಚರಣೆಯಲ್ಲಿ ಅಲೌಕಿ ದೈವೀಶಕ್ತಿ ಸ್ವರೂಪವನ್ನು ಭಯಭಕ್ತಿಯಿಂದ ಪೂಜಿಸಿ ಒಲಿಸಿಕೊಳ್ಳುವುದೇ ಮೂಲೋದ್ಧೇಶ. ಜನಸಾಮಾನ್ಯರೂ ಸರಳ ಪೂಜಾಪದ್ಧತಿಗಳಿಂದ ದೈವಾನುಗ್ರಹ ಪಡೆದು ಸಂತಾನಫಲ, ಸುಖ-ಶಾಂತಿ ಮತ್ತು ಸಂಪತ್ತುಗಳನ್ನು ಹೊಂದಬಹುದು. ಆದುದರಿಂದ, ಹಬ್ಬಗಳೆಂದರೆ, ವಿಶೇ಼ಷಭೋಜನ ಮಾಡಿ ಸಂಭ್ರಮಿಸುವುದಷ್ಡೇ ಅಲ್ಲ, ನಮ್ಮ ಹಿರಿಯರು ಹಾಕಿಕೊಟ್ಟ ಪರಂಪರಾಗತ ಸಂಪ್ರದಾಯಿಕ ಆಚರಣೆಯಲ್ಲಿರುವ ಅರ್ಥವನ್ನು ಗ್ರಹಿಸಿ ದೈವೀಶಕ್ತಿಸ್ವರೂಪಗಳಿಗೆ ಶರಣಾರ್ಥಿಗಳಾಗುವುದು. ನಮ್ಮ ರಾಷ್ಟ್ರಕವಿ ಕುವೆಂಪು ನುಡಿದಂತೆ- “ತನುವು ನಿನ್ನದು ಮನವು ನಿನ್ನದು| ಎನ್ನ ಜೀವನ ಧನವು ನಿನ್ನದು| ನಾನು ನಿನ್ನವನೆಂಬ ಹೆಮ್ಮೆಯ ಋಣವು ಮಾತ್ರವೆ ನನ್ನದು|”

ಎಲ್ಲ ದೈವೀಶಕ್ತಿ ಸ್ವರೂಪಗಳಲ್ಲಿ ಪ್ರಮುಖನಾಗಿದ್ದಾನೆ ಗಜಮುಖ. ಅವನಿಗೆ ಅಗ್ರಪೂಜೆ. ವಿಶ್ವಜೀವನದ ಬಹುರಾಷ್ಟ್ರಗಳಲ್ಲಿ ಗಣಪತಿ ಹಬ್ಬ ಪ್ರಾಮುಖ್ಯತೆ ಪಡೆದಿದೆ. ಅಮೆರಿಕದ ರೆಡ್ ಇಂಡಿಯನ್ ಜನಾಂಗೀಯದಲ್ಲಿ, ಮೆಕ್ಸಿಕೋದ ನಿವಾಸಿಗಳು ಗಣಪತಿಯನ್ನು ಹೋಲುವ ದೇವತಾಮೂರ್ತಿಯನ್ನು ಪೂಜಿಸುತ್ತಾರೆ. ದಕ್ಷಿಣ ಏಷಿಯಾ ದೇಶಗಳಲ್ಲಂತೂ ಗಣೇಶನ ಆರಾಧನೆ ಹೆಚ್ಚಾಗಿ ಆಚರಣೆಯಲ್ಲಿದೆ. ಜಾವಾ, ಬಾಲಿ, ಸುಮಾತ್ರಗಳಲ್ಲಿ ಮತ್ತು ಮುಸ್ಮಿಂ ರಾಷ್ಟ್ರವಾದ ಇಂಡೋನೇಷಿಯಾದಲ್ಲಿ(ಇಂದಿಗೂ ನೋಟಿನ ಮೇಲೆ ಗಣೇಶನ ಚಿತ್ರವನ್ನು ಮುದ್ದಿಸುತ್ತಾರೆ, ಥಾಯ್ ಲೆಂಡಿನಲ್ಲಿ ಗಣೇಶನ ಆರಾಧನೆ ಇದೆ. ಹಿಂದೆ ಚೋಳರ ಆಡಳ್ವಿಕೆ ದಕ್ಷಿಣ ಏಷಿಯಾದತ್ತ ವ್ಯಾಪಿಸಿತ್ತು ಎನ್ನುವುದಕ್ಕೆ ಇಲ್ಲಿ ಪುರಾವೆಗಳಿವೆ. ಜೈನರಲ್ಲಿ ಗಣೇಶ ಆರಾಧನೆ ಸರ್ವೇಸಾಮಾನ್ಯವಾಗಿದೆ. ಅವರ ವ್ಯವಹಾರೀಕ ದಿನಚರಿ ಆರಂಭವಾಗುವುದೇ ಗಣೇಶನನ್ನು ಸ್ತುತಿಸುವುದರಿಂದ. ಬೌದ್ಧರಲ್ಲಿ ಗಣೇಶ ಬುದ್ಧಿಪ್ರದ. ಜಪಾನ್ ದೇಶದ ಕೆಲ ಬೌದ್ಧ ದೇವಾಲಯಗಳಲ್ಲಿ ಗಣೇಶನ ಮೂರ್ತಿಗಳಿವೆ. ಜಪಾನ್ ನ ಕಾಂಗಿ ಬೌದ್ಧರಲ್ಲಿ ಗಣೇಶನ ಆರಾಧನೆ ಇದೆ. ಹೀಗೆ ವಿಶ್ವಜೀವನದಲ್ಲಿ ಸರ್ವಧರ್ಮ ಪೂಜಿತ ಸುಮುಖ ಗಣಪನಾಗಿದ್ದಾನೆ. ಶ್ರೀ ಗಜಮುಖ ಸೌಖ್ಯದಾತ| ಲೋಕಾದೀಶ ಸತತವು ನಮಿಪೆವು ಶ್ರೀ|| ಎಂಬ ಗೀತೆ ನಮ್ಮಲ್ಲಿದೆ.

ವೇದೋಕ್ತವಾಗಿ ಗಣಪತಿ ಎಂದರೆ ಅಖಿಲಾಂಡ ಕೋಟಿ ಬ್ರಹ್ಮಾಂಡದ ಗಣನಾಯಕ. ಗಣಗಳೆಂದರೆ ಮನುಷ್ಯಗಣ, ಪ್ರಾಣಿಪಕ್ಷಿಗಳಗಣ, ಸಸ್ಯ, ಹುಲ್ಲುಗರಿಕೆ, ವನ ವೃಕ್ಷಗಳಗಣ, ಸೌರಮಂಡಲದ ಭೂಮಿ ಮತ್ತು ಸಕಲಗ್ರಹಗಳು ಇವುಗಳೆಲ್ಲವೂ ಸೇರಿ ಚರಾಚರ ಜಗತ್ತು ನಿರ್ವಿಘ್ನವಾಗಿ ನಿರಂತರ ಚಲನೆಯಲ್ಲಿರಬೇಕಲ್ಲ. ಅವುಗಳ ಅಧಿನಾಯಕನೇ ಮಹಾಗಣಪತಿ. “ ಮೂಷಿಕವಾಹನ ಮೋದಕ ಹಸ್ತಾ... ಎಂದು ಆರಂಭವಾಗುವ ಗೀತೆ ಕೇಳಿದ್ದೇವೆ- ಮೋದಕ ಎಂದರೆ ಸದಾಕಾಲವೂ ಆನಂದ ಉಂಟುಮಾಡುವ ಪದಾರ್ಥ ಎಂದರ್ಥವೆನ್ನುತ್ತಾರೆ. ಆದುದರಿಂದಲೇ ಗಣಪತಿಗೆ ಮೋದಕ ಭಕ್ಷ್ಯವಿಶೇಷವೆಂದರೆ ಇಷ್ಟವಂತೆ. ಚತುರ್ಥಿಯಂದು ಗಣಪತಿಗೆ ವಿಶೇಷವಾಗಿ ಶ್ರದ್ಧಾಭಕ್ತಿಯಿಂದ ಪೂಜೆ ಮಾಡಿ ಮೋದಕಭಕ್ಷ್ಯವನ್ನು ನೈವೇದ್ಯಮಾಡಿ ಆನಂತರ ಅದನ್ನು ಪ್ರಸಾದವಾಗಿ ಸ್ವೀಕರಿಸುವುದರಿಂದ ಇಂದ್ರಿಯ ಸಂಪ್ರೀತಿ ಪ್ರಾಪ್ತವಾಗುವುದಲ್ಲದೇ, ನಾವು ಜೀವಾತ್ಮನಲ್ಲಿ ಪರಮಾತ್ಮನ ಪ್ರಸನ್ನಃತೆಯನ್ನೇ ಕಂಡುಕೊಳ್ಳಬಹುದೆಂಬ ನಂಬಿಕೆಯಿದೆ.

Tuesday, June 21, 2016

ಯೋಗ

ಯೋಗದಲ್ಲಿ ಎರಡು ವಿಧ:-
೧. ಭಾವನಾ ಯೋಗ
೨. ಪ್ರಾಣಸಂಯಮನ ಯೋಗ

ಒಂದು,
ಅಂತರಾತ್ಮನನ್ನು ಅರಿಯಲು
ಭಕ್ತಿಭಾವದ ಧ್ಯಾನ ಯೋಗ.
ಇನ್ನೊಂದು,
ಭವಸಾಗರ ಈಜಿ ಜಯಿಸಲು
ಪ್ರಾಣಸಂಯಮನ ಯೋಗ.
ಮೊದಲನೆಯದು ಸೂಕ್ಷ್ಮಶರೀರಕ್ಕೆ
ಎರಡನೆಯದು ಸ್ಥೂಲಶರೀರಕ್ಕೆ.


೧.ಭಾವನಾ ಯೋಗದಲ್ಲಿ,

ನೀನು ಬೇರೆಯಲ್ಲ
ನಾನು ಬೇರೆಯಲ್ಲ
ಎಂಬ ಚಿತ್ತವೃತ್ತಿಯಲಿದೆ
ಮನೋದಾರ್ಢ್ಯತೆ.

೨. ಪ್ರಾಣಸಂಯಮನ ಯೋಗದಲ್ಲಿ,

ನನ್ನ ಪ್ರಾಣ ಬೇರೆ
ಈ ಶರೀರ ಬೇರೆ
ಎಂಬ ಚಿಕಿತ್ಸೆಯಲಿದೆ
ದೇಹದಾರ್ಢ್ಯತೆ.

Sunday, August 24, 2014

ಹಿಂದೂಧರ್ಮ ಮತ್ತು ದೇವರುಗಳು

ನಾನು ತುಂಬ ಮೆಚ್ಚಿಕೊಂಡ ಪುಸ್ತಕಗಳಲ್ಲಿ ಒಂದು:-
ಸ್ವಾಮಿ ಸೋಮನಾಥಾನಂದ ಅವರ
“ ಹೈಮಾಚಲ ಸಾನ್ನಿಧ್ಯದಲ್ಲಿ”(ಪ್ರವಾಸ ಕಥನ). ಅಮಮರನಾಥ, ಕೇದಾರ ಮತ್ತು ಬದರಿ ಯಾತ್ರೆಗಳು.

ಎಷ್ಟು ಸಾರಿ ಓದಿದರೂ ಮತ್ತೆ ಮತ್ತೆ ಓದಿಸಿಕೊಳ್ಳುವ ಈ ಕೃತಿ ಪಂಡಿತರೂ ಪಾಮರರನ್ನೆಲ್ಲ ಬೆರಗುಗೊಳಿಸಿಬಿಡುತ್ತದೆ.
ದೇವರು ಇಲ್ಲ ಎನ್ನುವವರನ್ನೂ ಆಲೋಚನೆಗೆ ಹಚ್ಚುತ್ತದೆ ಎಂದರೆ ಅದನ್ನು ಓದಿ ರಸಸ್ವಾದನೆ ಮತ್ತು ಚಿಂತನೆ ಮಾಡಿಯೇ ತಿಳಿಯಬೇಕು.
ಸ್ವಾಮೀಜಿಯವರ ಬರವಣಿಗೆಗೆ ಯಾರನ್ನೂ ಸೆಳೆದಿಡುವ ಶಕ್ತಿಯಿದೆ.

ಹಿಂದೂಧರ್ಮದಲ್ಲಿ ಅಸಂಖ್ಯ ದೇವರುಗಳು-
ಯಾತ್ರಾರ್ಥಿಗಳಾಗಿ ನಡೆದ ಸ್ವಾಮೀಜಿ ಹೇಳುತ್ತಾರೆ- “ಹಿಂದೂಗಳ ಕಲ್ಪನಾ ಪ್ರಪಂಚ ಅತಿ ಪ್ರಚಂಡವಾದದ್ದು. ನಮ್ಮ ದೇವತೆಗಳ ಸಂಖ್ಯೆ ಮಾನವ ಜನಸಂಖ್ಯೆಯನ್ನೂ ಕೂಡ ಮೀರಿರುವುದು! ಹಾಗೇ ಒಂದಂಗುಲ ಸ್ಥಳವನ್ನೂ ಹಿಂದೂ ಬಿಡಲೊಲ್ಲ. ಅಲ್ಲಿ ಏನನ್ನಾದರೂ ಕೊರೆಯಲಿಚ್ಚಿಸುವನು. ಅವನಿಗೆ ಖಾಲಿ ಜಾಗ ಇಷ್ಟು ಸ್ಥಳ ವ್ಯರ್ಥವಾಯಿತಲ್ಲ” ಎಂದು ಬೇಗುದಿ ತರುವುದು. ದೇವರನ್ನು ನಿರಾಕಾರ ನಿರ್ಗುಣ ಎಂದು ಸಾರಿದ ಧರ್ಮ ಇಷ್ಟೊಂದು ದೇವ ದೇವತೆಗಳು ಇಷ್ಟು ಹುಲುಸಾಗಿ ಬೆಳೆಯುವುದಕ್ಕೆ ಯಾವ ಗೊಬ್ಬರವನ್ನು ಹಾಕಿತೋ! ಅವ್ಯಕ್ತ, ನಿರಂಜನ,ನಿರ್ಗುಣವೆಂಬ ಗೊಬ್ಬರವನ್ನೇ ಹಾಕಿರಬೇಕು. ರೂಪ ಅಪರೂಪಕ್ಕೆ,ಗುಣ,ನಿರ್ಗುಣದೆಡೆಗೆ, ಆಕಾರ,ನಿರಾಕಾರದೆಡೆಗೆ ಹೋಗಬೇಕಾದರೆ ಇವೇ ಮೆಟ್ಟಿಲು.ಈ ಮೆಟ್ಟಲಿಲ್ಲದೇ ಇದ್ದರೆ ಆಕಾರದಿಂದ ನಿರಾಕಾರಕ್ಕೆ ಮನುಷ್ಯ ನೆಗೆಯಲಾರ. ಒಂದೇ ಒಂದು ದೇವರು,
ಈ ಆಕಾರವನ್ನೆಲ್ಲ ತಾಳಿರುವನು ಮತ್ತು ಇವನ್ನು ಮೀರಿರುವನು ಎಂದು ಸಾರುವುದು ಹಿಂದೂಧರ್ಮ.

ದೇವರ ವಿಗ್ರಹಗಳನ್ನು ಶಿಲಾ ಮೂರ್ತಿಗಳನ್ನು ಭಿನ್ನ ಮಾಡಿರುವುದರ ಬಗ್ಗೆ ಸ್ವಾಮೀಜಿ ಹೇಳುತ್ತಾರೆ-
ಕುತುಬ್ ಮೀನಾರಿನ ಸುತ್ತಲೂ ಕೆಲವು ಬಿದ್ದು ಹೋದ ಮಸೀದಿಗಳಿವೆ. ಅಲ್ಲಿರುವ ಕಂಬಗಳೆಲ್ಲಾ ಹಿಂದೂ ಹಿಂದೂ ದೇವಸ್ಥಾನದಂತಿರುವುವು. ಆ ಕಂಬಗಳ ಮೇಲೆ ಕೊರೆದಿರುವ ವಿಗ್ರಹವನ್ನು ಭಿನ್ನ ಮಾಡಿ ಸ್ವಲ್ಪ ಬದಲಾಯಿಸಿ ಅದನ್ನು ಮಸೀದಿ ಮಾಡಿರುವರು. ಅವರೇನೋ ಹಿಂದೂ ದೇವರನ್ನು ನಾಶಮಾಡಿರುವೆವೆಂದು ತಿಳಿದುಕೊಂಡಿರಬಹುದು. ಹಿಂದೂ ದೇವರಿಗೆ ಒಂದು ಆಕಾರವಿಲ್ಲ. ಒಂದು ಆಕಾರದಿಂದ ಅವನನ್ನು ಓಡಿಸಿದರೆ ಮತ್ತೊಂದು ಆಕಾರವನ್ನು ಅವನು ಸೇರುವನು! ಶಿವನಿಂದ ಓಡಿಸಿದರೆ ಅಲ್ಲನೊಳಗೇ ಅವನು ಸೇರುವನು. ಕೊನೆಗೆ ಎಲ್ಲಾ ಆಕಾರಗಳನ್ನು ನಾಶಮಾಡಿದರೂ ನಿರಾಕಾರನಾಗಿ ನಿಂತು ಮನುಷ್ಯರು ಹುಚ್ಚನ್ನು ನೋಡಿ ನಗುವನು..”

- ಸ್ವಾಮಿ ಸೋಮನಾಥಾನಂದರು, ತಮ್ಮ “ಈ ಹೈಮಾಚಲ ಸಾನ್ನಿಧ್ಯದಲ್ಲಿ” ಪುಸ್ತಕಕ್ಕೆ ಮುನ್ನುಡಿ ಬರೆದುಕೊಡಿ ಎಂದು ನಮ್ಮ ನಾಡಿನ ಮೆಚ್ಚಿನ ಕವಿ ಕುವೆಂಪು ಅವರನ್ನು ಕೇಳಿಕೊಂಡಾಗ,

“ನಿಮ್ಮ ಪುಸ್ತಕ ಓದುತ್ತೇನೆ, ಸಾಧ್ಯವಾದರೆ, ಪ್ರೇರಣೆಯಾದರೆ, ಬರೆಯುತ್ತೇನೆ. ಇಲ್ಲದಿದ್ದರೆ ಇಲ್ಲ. ನಾನು ಬರೆದುಕೊಡುತ್ತೇನೆಂದು ನೀವು ಬಂಬಲೂ ಬಾರದು, ನಿರೀಕ್ಷಿಸಲೂಬಾರದು” ಎಂದು ನಿರ್ದಾಕ್ಷಿಣ್ಯವಾಗಿ ಹೇಳಿದರಂತೆ. ಸ್ವಾಮೀಜಿವರೂ “ಆಗಲಿ” ಎಂದು ಹೇಳಿ ಹೊದರಂತೆ. ಕೊನೆಗೂ ಹದಿನಾಲ್ಕು ಪುಟಗಳಷ್ಟು ಮುನ್ನುಡಿ ಬರೆದು ಕೊಟ್ಟ ಕುವೆಂಪು ತಮ್ಮ ಮುನ್ನುಡಿಯಲ್ಲೇ ಹೀಗೆ ಬರೆಯುತ್ತಾರೆ. ಕುವೆಂಪು ಅವರ ಮುನ್ನುಡಿಯ ಸಾಲು ಸಾಲುಗಳೂ ಚೇತೋಹಾರಿಯಾಗಿವೆ...ನಮ್ಮನ್ನು ಚಿಂತನ ಶೀಲರನ್ನಾಗಿಸುತ್ತವೆ...

ನೋಡಿ ಅವಲೋಕನ- ಹೊಸಬೆಳಕು;ಹೊಸತಿರುವು!
ಸ್ವಾಮಿ ವಿವೇಕಾನಂದರಿಗೂ ಮುನ್ನ ಆಗಿ ಹೋದ ಮಹಾನ್ ಯೋಗಿ ಶ್ರೀ ಪರಮಹಂಸ ಯೋಗಾನಂದ ಅವರ ಮಾತುಗಳು ಮತ್ತು ಕೃತಿಗಳು ಚಿರಸ್ಥಾಯಿಯಾಗಿವೆ. ಅವರ ಉತ್ತರಾಧಿಕಾರಿಯೇನೋ ಸ್ವಾಮಿ ವಿವೇಕಾನಂದರು.

Tuesday, July 29, 2014

ದೇವರು ಇದ್ದಾನೆಯೇ..?

ದೇವರು ಇದ್ದಾನೆಯೇ..? ಎಂಬ ಪ್ರಶ್ನೆಗೆ ’ದೇವರಲ್ಲಿ ನೀವಿದ್ದೀರಾ" ಎಂದು ಮಾರ್ಮಿಕ ವಾಗಿ ಕೇಳಿದರಂತೆ ಶರಣರೊಬ್ಬರು. ಹೌದು, ದೇವರಲ್ಲಿ ನಂಬಿಕೆಯ ಬಗ್ಗೆ ಮಾತನಾಡಿದರೆ, ಜಾರಿಕೊಳ್ಳುವ ಸೋ ಕಾಲ್ಡ್ ಸ್ಕಾಲರ‍್ಸ್ ಇದ್ದಾರೆ. (ಅವರನ್ನು Most of the useless scholars, because they much read ಎಂಬ ಈ ಗುಂಪಿಗೆ ಸೇರಿಸಬಹುದು).  ಅಂಥ ಮೇಧಾವಿಗಳ ಸಂಖ್ಯೆ ಗೇನು ಕಡಿಮೆ ಇಲ್ಲ ಬಿಡಿ. ಹಾಗೆ ನೋಡಿದರೆ, ಪ್ರಪಂಚದಲ್ಲಿ ನಾಸ್ತಿಕ ರ ಸಂಖ್ಯೆ... ಹೇಗೇ ಬೆಳೆದರೂ ಕಡಿಮೆಯೇ ಇರುತ್ತದೆ; ಅವರಲ್ಲಿ ಬಹು ಮಂದಿ ಹೆಚ್ಚು ಓದಿಕೊಂಡ ಸೋ ಕಾಲ್ಡ್ ಸ್ಕಾಲರ‍್ಸ್ ಗಳೇ ಇರುತ್ತಾರೆ. ದಯವಿಟ್ಟು ಕ್ಷಮಿಸಿ, ಮಹಾನ್ ದೈವಭಕ್ತರಾದ ಮೇಧಾವಿಗಳಾದ ಪ್ರೊಫೆಸರುಗಳೂ, ವಿಜ್ಞಾನಿಗಳೂ ಆಗಿಹೋಗಿದ್ದಾರೆ. ಇತ್ತೀಚೆಗೆ ಉಪಗ್ರಹ ಉಡಾವಣೆಗೆ ಮುನ್ನ ದೇವಾಲಯಕ್ಕೆ ಹೋಗಿ ಪ್ರಾರ್ಥನೆ ಸಲ್ಲಿಸಿದ ವಿಜ್ಞಾನಿಗಳನ್ನೂ ನಾವು ನೋಡಿದ್ದೇವೆ. ಬದ್ಧಿವಂತಿಕೆಯೇ ಭಗವಂತನ ಆಲಯ "(Intellect is the temple of God). ಎಂದೇ ಹೇಳುತ್ತಾರೆ. See More

Thursday, June 26, 2014

ವಿಷಯೋಪ ಭೋಗಗಳು...

ಈ ಪ್ರಪಂಚದಲ್ಲಿ ಎಲ್ಲ ವಿಷಯೋಪ ಭೋಗಗಳು ಮಾಯೆ ಎನ್ನುವುದಾದರೆ, ಅವುಗಳಲ್ಲಿ ಮೊದಲ ಸ್ಥಾನ ಹೆಣ್ಣಿಗೇ. ಆಕೆಯ ಸೌಂದರ್ಯ ಸೆಳೆತ, ಶೃಂಗಾರಮಯ ಲಾವಣ್ಯಗಳು ಎಂಥ ಪುರುಷನನ್ನೂ ವಿಚಲಿತಗೊಳಿಸದಿರಲಾರವು. ಆದರೆ, ಮಾಯೆಯನ್ನು ಗೆಲ್ಲದೇನೆ ಸಾಮಾನ್ಯನೊಬ್ಬ ಮಹಾಪುರುಷನಾಗಲಾರ. ಹಾಗೆ ಗೆಲ್ಲುವುದಕ್ಕೆ ಅವನ ಅಸ್ರ್ರಯಾವುದಿರಬಹುದು? ಅದು ಅಸ್ಖಲಿತ ಮನೋಭಾವದ ವಾತ್ಸಲ್ಯವೊಂದೇ.  ಅಂದರೆ, ಹೆಂಡತಿಯಲ್ಲಿ ಪ್ರೀತಿಯ ಸ್ಪರ್ಶಕ್ಕಿಂತಲೂ ತಾಯಿಯ ಪ್ರೇಮಸ್ಪರ್ಶದಲ್ಲಿರುವ ಅದಮ್ಯ ಅನುಬಂಧವೇ ಅದಾಗಿದೆ.

Friday, June 20, 2014

ಪ್ರಕೃತಿ-ಸೌಂದರ್ಯ

ಪ್ರಕೃತಿ-ಸೌಂದರ್ಯ ವನ್ನೇ ದ್ವೇಷಿಸುವವ ಸಂನ್ಯಾಸಿಯಾದರೂ ತನ್ನೊಳಗೆ ಶಾಂತ, ಸ್ವಸ್ಥ ಹಾಗೂ ಸುಂದರ ಚಿತ್ತಲಹರಿಯನ್ನು ಹೊಂದಲಾರ. ಮನುಷ್ಯನಿಗೆ ಸುಂದರವಾದದ್ದನ್ನು ಪ್ರೀತಿಸುವುದು ಸ್ವಭಾವಜನ್ಯವಾಗಿರಬೇಕಲ್ಲ... ಆಗ ಬದುಕೂ ಸುಂದರ ಹೂವಿನಂತೆ ಅರಳಿ ಘಮಘಮಿಸುತ್ತದೆ. ಹಾಗಲ್ಲದೇ, ಸುಂದರ ಹೆಣ್ಣನ್ನು ಬೇಕೆಂತಲೇ ಕಿಚಾಯಿಸುವುದು, ಪೀಡಿಸುವುದು ಸ್ವಾಭಾವಿಕವಲ್ಲ ಸಭ್ಯತೆಯ ಲಕ್ಷಣವಲ್ಲ. ಅದೊಂದು ವಿಚಿತ್ರ ವಿಲಕ್ಷಣ ಮನೋವಿಕಾರವೇ ಆಗುತ್ತದೆ. ಅಷ್ಟೇ ದುಷ್ಪರಿಣಾಮನ್ನುಂಟು ಮಾಡುತ್ತದೆ.

Monday, June 24, 2013

ದ್ವೈತ, ಅದ್ವೈತ ಮತ್ತು ವಿಷ್ಟಾ ದ್ವೈತ

ಪೂಜ್ಯದೃಷ್ಟಿ ಪ್ರೇಮದಿಂದ ಉದಿಸುತ್ತದೆ. ನಾವು ಯಾರನ್ನು ಪ್ರಿತಿಸಲಾರೆವೋ ಅವರನ್ನು ಗೌರವಿಸಲಾರೆವು. ಯಾವಾಗ ನಾವು ದೈತಿಗಳಂತೆ( ದೇವರು ಒಬ್ಬನೇ. ಅವನು ಸರ್ವಶಕ್ತನು. ಅವನೆಲ್ಲಿ ನಾನೆಲ್ಲಿ?) ಆರಾಧನಾ ಭಾವಹೊಂದುವೆವೋ ಪೂಜ್ಯಭಾವವು ಬರುತ್ತದೆ.

ಹಾಗಾಗಿ ಪ್ರತಿಮೆ ಅಥವಾ ಮೂರ್ತಿ ಪೂಜೆಯ ಅರ್ಥವೇನೆಂದರೆ, ಯಾವುದು ಬ್ರಹ್ಮವಲ್ಲವೋ ದೇವರು ಅಲ್ಲವೋ ಅದನ್ನು ದೇವರೆಂದೂ ಅದರಲ್ಲಿ ಆ ದೈವೀಶಕ್ತಿಯ ಸಂಚಲನವಿದೆಯೆಂದೂ ಭಾವಿಸಿಕೊಂಡು ಪೂಜಿವುಸುವೇ ಆಗಿದೆ. ಅಂದರೆ, ಮೂರ್ತಿಯೊಂದರ ಪ್ರಾಣಪ್ರತಿಷ್ಟಾಪನೆಯಲ್ಲಿ ಆ ದೈವಿಶಕ್ತಿಯನ್ನೇ ಆವಾಹನೆ ಮಾಡಿರುತ್ತಾರೆ.
ಮೂರ್ತಿಯನ್ನು ಪೂಜಿಸವುದೆಂದರೆ ಆ ದೈವೀಶಕ್ತಿಯನ್ನೇ ಕುರಿತು ತದೇಕ ಚಿತ್ತದಿಂದ ಧ್ಯಾನಿಸುವುದು.
ಪ್ರತಿಯೊಂದು ವಸ್ತುವಿನಲ್ಲೂ ಇರುವ ನಾಮ ರೂಪಗಳನ್ನು ತೆಗೆದುಬಿಟ್ಟರೆ ಎಲ್ಲ ಬ್ರಹ್ಮಮಯವೇ.
ಅದೆಂದರೆ, ದೈವಿಕತೆಯೇ ಎನ್ನುವನು ಅದೈತಿ. ದೇವರೇ ಎಲ್ಲರಲ್ಲೂ ಇರುವ ಅಂತರ್ಯಾಮಿ ಎನ್ನುವನು ವಿಶಿಷ್ಟಾದ್ವೈತಿ.


ಆದುದರಿಂದ ದ್ವೈತಿ-ದೇವರು ಒಬ್ಬನೇ. ಅವನೆಲ್ಲಿ ನಾನೆಲ್ಲಿ...? ಎನ್ನುವನು.
ಅದ್ವೈತಿ- ವಿಶ್ವಿಸೃಷ್ಟಿಯಲಿ ಎಲ್ಲ ವಸ್ತುಗಳೂ ಬ್ರಹ್ಮಮಯವೇ ನಾನೂ ಸೇರಿದಂತೆ ಎನ್ನುವನು.
ವಿಶಿಷ್ಟಾದ್ವೈತಿ- ದೇವರು ದೇವರೇ. ನಾನು ನಾನೇ. ನನ್ನಲ್ಲೂ ದೇವರನ್ನು ಕಾಣಬಹುದು. ಎಲ್ಲದರಲ್ಲೂ ದೇವರನ್ನು ಕಾಣಬಹುದು. ದೇವರು ಸಮಷ್ಟಿಯೇ ಆಗಿರುವನು.