Friday, July 27, 2007

ದೇವರು ಮತ್ತು ನಾವು

”ದೇವರು ಎಲ್ಲಿದ್ದಾನೆ ಬಿಡಿ! ಅವನು ಇದ್ದಿದ್ದರೆ ಇಷ್ಟೆಲ್ಲ ಅನ್ಯಾಯ-ಅನಾಚಾರ ಆಗುತ್ತಿರಲಿಲ್ಲ. ಅವನು ಕಣ್ಮುಚ್ಚಿ ಕುಳಿತಿದ್ದಾನೆ. ಕಲ್ಲಾಗಿದ್ದಾನೆ” ಹೀಗೆ ಹೇಳುವವರಿದ್ದೇವೆ. ಅತೀವ ಕಷ್ಟ ಕಾರ್ಪಣ್ಯಗಳಿಂದ,ಮಾನಸಿಕ ತಳಮಳ,ಹಿಂಸೆ-ಕಿರುಕುಳದಿಂದ ಬೇಸತ್ತಾಗ ನಿಜವಾಗಲೂ ದೇವರು ಎಲ್ಲಿದ್ದಾನೆ? ದೇವರು ಎಂದರೇನು ಚಿಂತಾಕ್ರಾಂತರಾಗುತ್ತೇವೆ...

ಚನ್ನ ವೀರ ಎಂಬ ಶರಣರೊಬ್ಬರು-
ದೇವರು ಎಲ್ಲಿಲ್ಲ? ದೇವರಲ್ಲಿ ಇದ್ದವರು ಗೆದ್ದವರು ಎಂಬ ಮಾರ್ಮಿಕ ಪ್ರಶ್ನೆಯಿಂದ ನಮ್ಮೊಳಗೇ ನಾವು ದೇವರನ್ನು ಹುಡುಕುವಂತೆ ಮಾಡುತ್ತಾರೆ.

ದೇವರು ಎಲ್ಲರಲ್ಲೂ ಇದ್ದಾನೆ. ಎಲ್ಲಾ ಕಡೆಯೊ ಇದ್ದಾನೆ ಎಂಬ ನಂಬಿಕೆಯೆ ಅನೂಚಾನವಾಗಿ ಬಂದಿದೆ. ಅಲ್ಲದೇ ದೇವರಿಲ್ಲ ಮಾನವೀಯತೆ ಎಂಬುದೇ ಸತ್ತಿದೆ. ದಯಾಮಯನಾದ ದೇವರು ಇದ್ದಿದ್ದರೆ ಯಾಕೆ ಹೀಗೆ ಸುಮ್ಮನಿರುತ್ತಿದ್ದ...? “ಯದಾ ಯದಾಹಿ ಧರ್ಮಸ್ಯ... “ಎಂಬಂತೆ ಅವನೇಕೆ ಇನ್ನೂ ಅವತರಿಸಿಲ್ಲ; ಅವನು ಹಾಗೆ ಅವತರಿಸುವುದೆಂದರೆನು? ಎಂಬುದರ ಮೇಲೇ ಸ್ವತಃ ಆತ್ಮಶೋಧನೆ, ಹೊರಗೂ ಹಿಂದು ಮುಂದಿನ ಸಂಗತಿಗಳಿಂದ ಸಂಶೋಧನೆಗಳನ್ನೇನೂ ಮಾಡಲಾರದೇನೆ ದೇವರಿಗೆ ಎಷ್ಟೋ ರೂಪಗಳು, ಅವನಿಗೆ ಎಷ್ಟೋ ಹೆಸರುಗಳು, ಹೆಂಡತಿಯರು? ಅವನು ಯಾವ ಜಾತಿಯವನು? ಯಾವ ಯಾವ ಜಾತಿಗಳಲ್ಲಿ ಅವನನ್ನು ಹೇಗೆ ಪೂಜಿಸುತ್ತಾರೆ; ಆರಾಧಿಸುತ್ತಾರೆ? ದೇವರೆಂಬುದೇ ಒಂದು ಮೊಢ ನಂಬಿಕೆ. ಅಂಥ ಮೊಢ ನಂಬಿಕೆಯಿಂದಲೇ ನಮ್ಮ ಬಡಪಾಯಿ ಜನ ಬದುಕುತ್ತಿದ್ದಾರೆ;(ನಿಜಕ್ಕೂ ದೇವರ ಹೆಸರಲ್ಲಿ ಶೋಷಣೆ ಮಾಡುವವರಿರಬಹುದು. ಆ ಮಾತು ಬೇರೆಯೆ)ಎಂಬಂತಹ ಸಂಶೋಧನಾತ್ಮಕ ಪ್ರಬಂಧಗಳನ್ನೇ ಬರೆದು ಖ್ಯಾತಿಗಳಿಸುವಂಥ ಗಣ್ಯಾತಿ ಗಣ್ಯರಿದ್ದಾರೆ!

ನಮ್ಮ ಇದೇ ಯುಗದಲ್ಲಿ ಆಗಿ ಹೋದ ಶರಣರು, ಹರಿದಾಸರು, ದಾರ್ಶನಿಕರು, ಕವಿಗಳು ಯಾವೊಂದೂ ಫಲಾಪೇಕ್ಷೇ ಇಲ್ಲದೇನೆ ಹಾಡಿ ಹೊಗಳುತ್ತಾ ನಿರ್ವ್ಯಾಜ ಪ್ರೇಮದಿಂದ ಕಂಡಂಥ ಹಾಗೂ ಜನಸಾಮಾನ್ಯರೆನಿಸಿದ ಕೋಟ್ಯಂತರ ಬಡಪಾಯಿಗಳು ತಮ್ಮ ಭವರೋಗಗಳ ನಿವಾರಣೆಗಾಗಿಯೆ ಕಂಡಂಥ ದೇವರನ್ನು ತಾವು ಕಾಣಲಾರೆವೇಕೆ ಎಂದು ಇಂಥ ಆಧುನಿಕರು ಯೋಚಿಸಲಾರರೇಕೆ? ಜನಸಾಮಾನ್ಯರ ಸಾಹಿತಿಯಾಗಿ ಎಲ್ಲರ ಮನೆ ಮಾತಾಗಿದ್ದ ಅ.ನ.ಕೃಷ್ಣರಾಯರ ನುಡಿಯೊಂದು ಹೀಗಿದೆ-
ವಿಶ್ವ ಸಿಡಿದೊಡೆಯದಂತೆ ಇನ್ನೂ ಹಿಡಿದಿಟ್ಟಿರುವುದು ಮಾನವತೆಯೊಂದೇ
ಕವಿ ಮಾನವತೆಯೆ ಪ್ರವಾದಿ.


ಅಂದರೆ, ವಿಶ್ವ ಸಿಡಿದೊಡೆದು ಛಿದ್ರವಾಗದಿರುವುದಕ್ಕೆ ಕಾರಣ ಇನ್ನೂ ಮಾನವೀಯತೆ ಉಳಿದಿರುವುದೇ ಆಗಿದೆ. (ಇಲ್ಲವೇ ಹಿರೋಷಿಮಾದಂಥ ಅಷ್ಟೇಕೆ ಅದಕ್ಕೂ ಮಿಗಿಲಾದ ಆಧುನಿಕ ತಂತ್ರಜ್ಞಾನದ ಸಹಸ್ರಾರು ಬಾಂಬುಗಳು ಒಮ್ಮೆಲೆ ಎಲ್ಲ ಕಡೆ ಬಿದ್ದಾವು).

ಕೆಲವೊಮ್ಮೆ, ಪ್ರಕೃತಿಯಿಂದಲೋ ದುಷ್ಟ ಮನುಷ್ಯರಿಂದರಲೋ ಆಗಬಾರದಂತಹ ಅನಾಹುತಗಳಿರುವುದರಿಂದಲೇ ಒಳ್ಳೆಯದಕ್ಕೇ, ಸಾತ್ವಿಕತೆಗೇ ದೈವತ್ವಕ್ಕೆ ಇನ್ನೂ ಎಲ್ಲ ಕಾಲಕ್ಕೂ ಬೆಲೆ ಇರುವುದು ಕೂಡ ಎಂಬುದನ್ನೂ ಮರೆಯಬಾರದು.
ಜಗತ್ತು ಎಂದಿಗೂ ತ್ರಿಗುಣಾತ್ಮಕ. ನನ್ನ "ಸಪ್ತಗಿರಿ ಸಂಪದ" ಪುರಾಣ ಕಥಾನಕ ನೋಡಿ.

ಹೌದು, ಈ ಮಾನವೀಯತೆಯ ಅಳತೆಗೋಲೊಂದಿದ್ದರೆ ಅದು ದೈವತ್ವವೇ. ನಮ್ಮ ಆತ್ಮಕ್ಕೆ ಪರಮಾಪ್ತವಾದದ್ದೇ ಅದು. ಯಾವುದು ನಮಗೆ ಪರಮಾಪ್ತವೋ ಅದೇ “ಪರಮಾತ್ಮ. ಆ ಪರಮಾತ್ಮನೇ ದೇವರು.” ಅಂಥಹ ದೈವತ್ವಕ್ಕೆ ನಿಷ್ಟರಾಗಿರುವುದೇ ಭಕ್ತಿ ಭಾವ. ಅಂತೆಯೆ, ದೈವತ್ವವೆಂಬುದರ ಭದ್ರ ಬುನಾದಿಯೊ ದೈವ ಭಕ್ತಿಯೆ ಆಗಿರುತ್ತದೆ. ದೇವರು, ದೈವತ್ವ, ದೈವ ಭಕ್ತಿ ಇವುಗಳಲ್ಲಿ ತಮ್ಮನ್ನು ಕಂಡು ಕೊಳ್ಳಬಲ್ಲವರೇ ದೇವರಲ್ಲಿದ್ದವರಾಗಿದ್ದಾರೆ. ಇಹದಿಂದ ಮುಕ್ತಿ ಎಂಬ ಮಹಾಸೌಧ ಕಟ್ಟ ಬಲ್ಲವರೂ ಅವರೇ ಆಗಿರುತ್ತಾರಲ್ಲ...

ಅ.ನ.ಕೃ. ಮುಂದುವರೆದು ಹೇಳುತ್ತಾರೆ-
ದೇವರು ಎಂಬ ಪರವಸ್ತುವೊಂದಿದೆ. ಅದು ಶಕ್ತಿ, ಸೌಂದರ್ಯ, ಸತ್ಯದ ಘನೀಭೂತ ಮೊರ್ತಿಯಾಗಿದೆ. ಮಾನವ ಆ ದೇವನ ಅಂಶ ಎನ್ನುವ ನಂಬಿಕೆ ಜನತೆಯಲ್ಲಿ ಹಲವು ಕಾರಣಗಳಿಂದ ಕ್ಷಯಿಸಿ ಹೋಗಿರುತ್ತದೆ. ದೇವರಿಲ್ಲ ಎಂಬ ನಾಸ್ತಿಕತನ ಒಂದೆಡೆ ತನ್ನ ಸಂದೇಶ ಬೀರಿದರೆ, ಸಹಸ್ರಾರು ದೇವತೆಗಳಿದ್ದಾರೆಂಬ ನಂಬಿಕೆ ಮತ್ತೊಂದೆಡೆ ಮನಷ್ಯ ಚೇತನವನ್ನು ಹರಿದು ಹಂಚಿ ಬಿಡುತ್ತದೆ.

ಅಂಥ ಚೇತನ ಸ್ವರೂಪಗಳ ಚಿಂತನೆಯ ವೈಶಿಷ್ಟ್ಯವೇ ಬೇರೆ. ವಿಶ್ವ ಮಾನವ ಚೇತನ ಸ್ವರೂಪರೇ ಆದ ಕುವೆಂಪುರವರ ಈ ಗೀತೆಯನ್ನೇ ನೋಡಿ,

ಓ ನನ್ನ ಚೇತನ ಆಗು ನೀ ಅನಿಕೇತನ....
ರೂಪ ರೂಪಗಳನು ದಾಟಿ
ನಾಮ ಕೋಟಿಗಳನು ಮೀಟಿ
ಎದೆಯೆ ಬಿರಿಯೆ ಭಾವ ದೀಟಿ
ಓ ನನ್ನ ಚೇತನ ಆಗು ನೀ ಅನಿಕೇತನ.

ನೂರು ಮತದ ಹೊಟ್ಟ ತೂರಿ
ಎಲ್ಲ ತತ್ವದ ಎಲ್ಲೆ ಮೀರಿ
ದಿಗ್ ದಿಗಂತವಾಗಿ ಏರಿ
ಓ ನನ್ನ ಚೇತನ ಆಗು ನೀ ಅನಿಕೇತನ...

ರಸ ಋಷಿ ಕುವೆಂಪು ತಮ್ಮ ಆತ್ಮನಲ್ಲೇ ಆ ದಿವ್ಯ ಚೇತನ ಸ್ವರೂಪವನ್ನು ಕಂಡಿದ್ದಾರೆ; ನೂರು ಮತಗಳನ್ನು ಹೊಟ್ಟಿನಂತೆ ತೂರಿ ಎಲ್ಲ ತತ್ವದ ಎಲ್ಲೆ ಮೀರಿ ಇಂದಿಗೂ ದಿಗ್ ದಿಗಂತವಾಗಿ ಏರಿ ನಮ್ಮ ನಡುವೆ ಅಮರ ಸಂದೇಶ ಬೀರಿ ಅಮರರಾಗಿದ್ದಾರಲ್ಲವೇ..
ಕುವೆಂಪುರವರ ಚೇತನ ಸ್ವರೂಪವು ಆತ್ಮ-ಪರಮಾತ್ಮನ ಶೋಧನೆಯನ್ನೇ ಮಾಡಿದೆ.
ಓ ಅನಂತವಾಗಿರು.. ಎಂದು ಅನಂತದಲ್ಲೇ ಲೀನವಾಗಿದೆಯಲ್ಲ.

ಹನ್ನೆರಡನೇ ಶತಮಾನದಲ್ಲೇ ಆಗಿ ಹೋದ ಶರಣರಾದ ದಾರ್ಶನಿಕ ಬಸವಣ್ಣನವರು- ಉಳ್ಳವರು ಶಿವಾಲಯವ ಮಾಡುವರು ನಾನೇನ ಮಾಲಿ ಬಡವನಯ್ಯ ಎನ್ನ ಕಾಲೇ ಕಂಭ ದೇಹವೇ ದೇಗುಲ ಶಿರ ಹೊನ್ನ ಕಳಸವಯ್ಯ ಕೂಡಲ ಸಂಗಮ ದೇವ ಕೇಳಯ್ಯ|

ಬಸವಣ್ಣನವರು ತಮ್ಮ ಕಾಯದಲ್ಲೇ ಶಿವಾಲಯ ಕಾಣುವ ಶರಣರಾಗಿ ತಮಗೆ ಪರಮಾಪ್ತವಾದ ಆತ್ಮನಲ್ಲೇ ಪರಮಾತ್ಮನನ್ನು ಅಂದರೆ ದೇವರನ್ನು ಕಂಡವರಾಗಿ ಆ ಚೇತನ ಸ್ವರೂಪದಲ್ಲೇ ದೇವರಲ್ಲಿದ್ದವರಾಗಿ ತಾವು ಕೂಡ ಹುಟ್ಟಿ ಬೆಳೆದ ಜಾತಿ ಮತಗಳನ್ನು ಹೊಟ್ಟಿನಂತೆ ತೂರಿ ಒಗೆದೇ ಗೆದ್ದಿದ್ದಾರೆ.
ಈ ಇಪ್ಪತ್ತೊಂದನೇ ಶತಮಾನದ ಕೆಲ ವಿದ್ವಾಂಸರುಗಳಿಗೆ ಮಾತ್ರ ಕಳೆದ ಎಂಟು ಶತಮಾನಗಳಲ್ಲಿ ಯಾರೂ ಕಂಡರಿಯಲು ಹೋಗದ ಗಂಭೀರವಾಗಿ ಪರಿಗಣಿಸದಂತಹ ಬಸವಣ್ಣನವರ ಜಾತಿ, ಹುಟ್ಟು, ಕುಲ- ಗೋತ್ರಗಳೇ ಆ ಮಹಾನುಭಾವರ ದಾರ್ಶನಿಕತೆಯುಳ್ಳ ಶ್ರೇಷ್ಠ ಕೃತಿ ವಚನಗಳಿಂತ ಅವೇ ಅಧ್ಯಯನದ ಮೊಲ ಆಕರ ಹಾಗೂ ಆಧಾರ ಸ್ತಂಭವಾಗಿರುವುದೇ ಶೋಚನೀಯವೆನಿಸಿದೆ. ಯಾವೊಂದು ಆತ್ಮಶೋಧನೆಗಿಂತ ಇಂತಹ ಜಾತಿ ಹುಟ್ಟು ಕುಲ ಗೋತ್ರಗಳಶೋಧನೆಯೇ ಅವರ ಸಂಶೋಧನಾತ್ಮಕ ಪ್ರಬಂಧಗಳ ವೈಶಿಷ್ಟ್ಯವೆನಿಸಿದೆ, ಅಂತಹ ಬರವಣಿಗೆಯಿಂದಲೇ ತಾವೂ “ವಿಜೃಂಭಿಸಿ’’ ಮೆರೆದು ಹಣ ಮಾಡಿಕೊಳ್ಳುವ ಹುನ್ನಾರವೇ!

ಮನುಷ್ಯ ಹುಟ್ಟಿನಿಂದ ಒಂದು ಪ್ರಾಣಿಯಷ್ಟೇ. ಅವನು ಚೇತನ ಸ್ವರೂಪನಾಗಿ ಮಾನವನಾಗುವುದು. ತನಗೆ ಪರಮಾಪ್ತವಾದ ಆತ್ಮನ ಅರಿವುಮೊಡಿದಾಗ ಆ ಆತ್ಮನಲ್ಲೇ ಇರುವ ಪರಮಾತ್ಮನಿಗೆ ನಿಷ್ಠೆಯಿಂದಿದ್ದಾಗಲೆ;ದೈವತ್ವವನ್ನು ಕಾಣವುದು. ಯಾಕೆಂದರೆ, ಈಗಾಗಲೇ ನಾನು ಹೇಳಿದಂತೆ ಮಾನವತ್ವಕ್ಕೆ ಅಳತೆಗೋಲೊಂದಿದ್ದರೆ ಅದು ದೈವತ್ವವೇ ಎಂಬುದು ಸ್ಪಟಿಕದಷ್ಟು ಸ್ಪಷ್ಟವಾಗಿ ನಿಚ್ಛಳವಾಗಿರುತ್ತದೆ.

ಮೇಲ್ನೋಟಕ್ಕೆ ನಮ್ಮ ಸುತ್ತ ಮುತ್ತ ಕೆಟ್ಟದ್ದೆಂಬುದೇ ಹೆಚ್ಚು ವಿಜೃಂಭಿಸುತ್ತಿರುತ್ತದೆ. ದೇವರು ಎಲ್ಲಿದ್ದಾನೆ? ದೈವತ್ವ ಎಲ್ಲಿದೆ? ಮಾನವತೆಯೆ ಸತ್ತು ಹೋಗಿದೆ ಎನಿಸುತ್ತದೆ. ಇಲ್ಲ, ಮಾನವತೆ ಇನ್ನೂ ಸತ್ತಿಲ್ಲ ಎಂಬುದಕ್ಕೇ ನಾವಷ್ಟೋ ಉದಾಹರಣಗೆಳನ್ನು ಕಾಣುತ್ತಲೇ ಇರುತ್ತೇವೆ; ಆದರೆ, ಒಳಿತೆಂಬುದರ ಪ್ರಭಾವಕ್ಕಿಂತ ಕೆಡುಕಿನ ಸಂಗತಿಗಳೇ ಹೆಚ್ಚಾಗಿ ಕಾಣಸಿಗವುದರಿಂದ ಅಂತಹ ಒಳಿತಿನ ಪ್ರಸಂಗಗಳನ್ನೇ ಮರೆತು ಬಿಡುತ್ತೇವಲ್ಲ. ಇಲ್ಲ ಹಾಗಾಗಬಾರದು. ಯಾಕೆಂದರೆ, ಮಾನವತೆ ಸಂಪೂರ್ಣವಾಗಿ ಸತ್ತುಹೋದ ದಿನ ಇಡೀ ವಿಶ್ವದ ಸರ್ವನಾಶವಾಗಿರತ್ತದೆ! ಅದೆಂದಿಗೂ ಆಗಲಾರದೆಂಬ ನಂಬಿಕೆಯ ಮೇಲೇ ಇಡೀ ವಿಶ್ವನಿಂತಿದೆ. ಆ ನಂಬಿಕೆಯ ಹಿಂದೆ ಇರುವುದೇ ಮಾನವತೆ; ಅದರ ದೈವಿಕತೆಯಷ್ಟೇ..

ಇಂದು ನಮ್ಮ ಭಾರತ ಆಧ್ಯಾತ್ಮಿಕ ಉನ್ನತಿಯಲ್ಲಿಯೆ ಪ್ರಗತಿ ಕಾಣತೊಡಗಿದೆ. ಇಡೀ ವಿಶ್ವಕ್ಕೇ ಮಾದರಿ ಎನಿಸಿದೆ. ನಮ್ಮ ಮಹತ್ತರ ಘೋಷಣೆ ಎಂದರೆ “ಜಾತ್ಯಾತಿ ರಾಷ್ಟ್ರ” ಆದರೇನು! ವಿಪರ್ಯಾಸವೆಂದರೆ ಇಲ್ಲಿ ಜಾತಿ ರಾಜಕಾರಣವೆ ಮೇಲುಗೈ ಪಡೆದಿರುವಂತಿದೆ. ಏನೇ ಆಗಲಿ, ಈ ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಮುಂದುವರೆದಿರುವ ಇಪ್ಪತ್ತೊಂದನೇ ಶತಮಾನದಲ್ಲಿಯೊ ಕೂಡ ಅತ್ಯಂತ ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಿ ಎಲ್ಲೆಡೆಯಲ್ಲೂ ಆಧ್ಯಾತ್ಮ ಮತ್ತು ಧ್ಯಾನವೇ ಸರ್ವರೋಗ ನಿವಾರಣಿ ಎಂದೂ ನಮ್ಮ ಭಾರತದಿಂದಲೇ ಪ್ರತಿ ಪಾದನೆಯಾಗುತ್ತಿರುವ ಸಂದರ್ಭದಲ್ಲಿ ನಮ್ಮ ಇಡೀ ಜನಾಂಗ ಹೆಮ್ಮೆಯಿಂದ ಬದುಕುತ್ತಿರುವಾಗ, ಇಲ್ಲಿ ನಮ್ಮ ನಮ್ಮೊಳಗೇ ಜಾತಿಯನ್ನು ಎತ್ತಿ ಹಿಡಿದೆಳೆದಾಡುವ ಮಹಾನ್ ಸಂಶೋಧಕರೂ ವಿದ್ವಾಂಸರೂ ಹುಟ್ಟಿಕೊಂಡಿದ್ದಾರೆ!

ಇದೆಲ್ಲ ಯಾಕಾಗಿ, ಹಣಕ್ಕಾಗಿಯೆ? ಹೌದು, ಭಾರತದಲ್ಲಿ ಹಣವೇ ಮಾತನಾಡುವುದು ಎನ್ನುವವರಿದ್ದಾರೆ. ಆದರೂ ಇಲ್ಲಿ ಭಗವಂತನೊಡನೆ ಮಾತನಾಡುವವರಿಗೇನೂ ಕಡಿಮೆ ಇಲ್ಲ. ನೀವು ಮಾತನಾಡಿದ್ದೀರಾ ಎಂದು ನೀವು ಕೇಳ ಬಹುದು. ನಾನಾಗಲೇ ಹೇಳಿದಂತೆ ನನಗೆ ಆಪ್ತನಾದ ಆತ್ಮ ಆ ಪರಮಾತ್ಮನೊಡನೆ ಮಾತನಾಡಿರಲಿಕ್ಕೂ ಸಾಕು. ಅವನ ಅರಿವಿನಿಂದಲೇ ಈ ಲೇಖನವೂ ಕೂಡ. ಆದರೂ ಆ ನನ್ನ ಅಂತರಾತ್ಮನ ಅರಿವೇನೆಂಬುದನ್ನು ಯಾವ ಶಬ್ದಗಳಲ್ಲೂ ಹಿಡಿದಿಡಲು ಖಂಡಿತ ಸಾಧ್ಯವಾಗಿಲ್ಲವೆಂದೇ ಹೇಳುತ್ತೇನೆ. ಪ್ರಾಯಶಃ ಅಂತಹ ಅಂತರಾತ್ಮನ ಅರಿವು ನಿಮಗೂ ಆಗಿರಲೂ ಬಹುದು. ಆದ್ದರಿಂದಲೇ, ಖಂಡಿತವಾಗಿ ಹೇಳ ಬಲ್ಲೆವು ನಾವು; ಭಗವಂತನಿಲ್ಲದ ಕೋಟ್ಯಂತರ ಭಾರತೀಯರ ಅಷ್ಟೇಕೆ ವಿಶ್ವದ ಜನಸ್ತೋಮದ ಬದುಕನ್ನು ನಾವೆಂದೂ ಊಹಿಸಿಕೊಳ್ಳಲಾರೆವಲ್ಲ. ಇನ್ನೂ ಹೇಳಬೇಕೆಂದರೆ, ನಮ್ಮ ಭಾರತದ ಬಡಜನತೆ ಬದುಕುವುದೇ ಭಗವಂತನ ಕೃಪೆ ತಮಗಿದೆ;ತಮಗಾಗತ್ತದೆ ಎಂಬ ಆಸೆಯೊಂದರಿಂದ; ಆ ಅಚಲ ನಂಬಿಕೆಯಿಂದ. ಅಂತೆಯೆ, ನಮ್ಮ ಭಾರತ ಅನಾದಿ ಕಾಲದಿಂದ ಭಗವಂತನಲ್ಲಿದ್ದೇ ಗೆದ್ದಿದೆ; ಆ ಬಗೆಯ ಆಧ್ಯಾತ್ಮಿಕ ಉನ್ನತಿಯನ್ನೂ ಸಾಧಿಸುತ್ತ ಗೆಲ್ಲುತ್ತಲೇ ಇದೆ ಇಂದಿಗೂ ಇಡೀ ವಿಶ್ವಕ್ಕೇ ಮಾದರಿಯೆನಿಸಿದೆ. ಅದೇ ಜಾತಿ ಬೇಧಗಳಿಂದಲ್ಲ. ಹಾಗೂ ದೈವಿಕತೆಯಿಲ್ಲದ  ಧಾರ್ಮಿಕತೆ ಎಂಬುದಿಲ್ಲ. "ಧರ್ಮ-ಧಾರ್ಮಿಕತೆಗೆ" ವಿಪರೀತಾರ್ಥ ಕಲ್ಪಿಸಿ ವಿತಂಡವಾದಗಳನ್ನು ಹುಟ್ಟು ಹಾಕುವಂತಹ ಮತ್ತು ಜೀವಾತ್ಮನನ್ನು ತಣಿಸಲಾಗದಂತಹ  ವೈಜ್ಞಾನಿಕ ವಿಚಾರಗಳಿಂದಂತೂ ಅಲ್ಲವೇ ಅಲ್ಲ.

No comments: