ಐನ್ ಸ್ಟೈ ನ್ ಇಪ್ಪತ್ತನೇ ಶತಮಾನದ ಜಗತ್ತಿನ ಅತಿ ದೊಡ್ಡ ಭೌತಶಾಸ್ತ್ರಜ್ಞ. ಹಾಗೂ ಗಾಂದೀಜಿಯಂತೆಯೇ ಶಾಂತಿ ದೂತ. ಚಿಕ್ಕ ವಯಸ್ಸಿನಲ್ಲೇ ಸಾಪೇಕ್ಷ ಸಿದ್ಧಾಂತ, ಶಕ್ತಿ ಸಿದ್ಧಾಂತ ಮುಂತಾದ ವಿಷಯಗಳ ಮೇಲೆ ಅತಿ ಮಹತ್ವದ ಪ್ರಬಂಧಗಳನ್ನು ಬರೆದು ವಿಶ್ವದಾದ್ಯಂತ ಹೆಸರು ಗಳಿಸಿದ. ಈ ವಿಜ್ಞಾನಿ ಆಗಾಗ ತನ್ನ ಮಾತಿನಲ್ಲಿ ದೇವರ ಹೆಸರು ತರುತ್ತಿದ್ದುದುಂಟು. ಆದರೆ, ಜನ ಸಾಮಾನ್ಯರು ಬಳಸುವ ಅರ್ಥದಲ್ಲಲ್ಲ. ದೈವ ವಿಶ್ವಾಸಿಯಲ್ಲದ ಐನ್ ಸ್ಟೈನ್ ಗೆ ದೇವರೆಂದರೆ ವಿಶ್ವದ ಮೊಲ ಹಾಗೂ ಏಕಮೇವ ವೈಜ್ಞಾನಿಕ ಸೂತ್ರಕ್ಕೆ ಪರ್ಯಾಯ ಪದವಾಗಿತ್ತು, ತನ್ನ ಆಯಸ್ಸಿನ ಕೊನೆಯ ಸುಮಾರು ನಲವತ್ತು ವರ್ಷಗಳನ್ನು ಆತ ಈ ರಹಸ್ಯವನ್ನು ಬಿಡಿಸುವ ಪ್ರಯತ್ನದಲ್ಲಿ ಕಳೆದನೆನ್ನಬಹುದು. ಈ ತನ್ನ ಶಂಶೋಧನಾ ವಿಷಯಕ್ಕೆ ಅವನು ಸಮೀಕೃತ ಕ್ಷೇತ್ರ ಸಿದ್ಧಾಂತ" (Unified field theory) ಎಂದ ಹೆಸರು ಕೊಟ್ಟಿದ್ದ.
ಐನ್ ಸ್ಟೈ ನ್ ನಾಲ್ಕು ದಶಕಗಳ ಕಾಲ ಯತ್ನಿಸಿದರೂ ಸಮೀಕೃತ ಕ್ಷೇತ್ರ ಸಿದ್ಧಾಂತ ಒಂದು ಹಗಲುಗನಸಾಗಿಯೆ ಉಳಿಯಿತು. ಮನುಷ್ಯರಿಂದ ತಿಳಿಯಲಾರದ ಸತ್ಯವಾಗಲಿ ಮೊಲ ಸೂತ್ರವಾಗಲಿ ಇದೆಯೆಂದಾದರೆ, ಅದು ಇದೆ ಎಂದು ಸಾಧಿಸುವುದು ಹೇಗೆ ಸಾಧ್ಯವಿಲ್ಲವೋ ಹಾಗೆಯೆ ಇಲ್ಲವೆಂದು ಸಾಧಿಸುವುದೂ ಕೂಡ ಅಸಾಧ್ಯ. ಆದ್ದರಿಂದ, ಆ ಕುರಿತಾದ ಚರ್ಚೆಯೆ ಅರ್ಥಹೀನವಾಗುತ್ತದೆಎ. ಆದರೆ, ಅ ಕುರಿತಾದ ಸಂಶೋಧನೆ ಅರ್ಥಹೀನವಾಗುವುದಿಲ್ಲ.
ಭೌತ ಜಗತ್ತಿನ ಹಿಂದೆ ಸಮೀಕೃತ ಸೂತ್ರವಿದೆಯೆಂಬ ನಂಜಿಕೆಯಾದರೂ ಏಕೆ? ಕೆಲವು ವರ್ಷಗಳ ಹಿಂದೆ ಇದು ಕೇಳಬಾರದ ಪ್ರಶ್ನೆ. ಆದರೆ, ಈಗ ಹಾಗಲ್ಲ, ವೈರುಧ್ಯಗಳನ್ನು ಅನುಮಾನಗಳನ್ನು ಬಹಳತ್ವವನ್ನು ಒಪ್ಪಿಕೊಳ್ಳುವುದು ಇಂದು ಸಾಧ್ಯ. ಆದ್ದರಿಂದ, ಅನೇಕ ಸೂತ್ರಗಳು ಕೆಲವೊಂದು ಪರಸ್ಪರ ವಿರುದ್ಧವಾದವು ಕೂಡಾ ಲೋಕದಲ್ಲಿ ಒಟ್ಟೊಟ್ಟಿಗೇ ಇರಬಾರದೇಕೇ ಎಂದು ನಾವು ಕೇಳಬಹುದು.
ಜಗತ್ತಿನ ಶಕ್ತಿಗಳೆಲ್ಲ ಸಾಂಗತ್ಯದಲ್ಲಿವೆ ಎಂಬ ನಂಬಿಕೆಯ ಹಿಂದೆ ಅವು ಹಾಗೆ ಇರಬೇಕು ಎಂಬ ಅಭಿಲಾಷೆಯೆ ಹೆಚ್ಚು ಕೆಲಸ ಮಾಡುವ ಹಾಗೆ ಕಾಣುತ್ತದೆ.
ದೇವರನ್ನು ಕಳಕೊಂಡ ಮನುಷ್ಯ ಈ ಶೂನ್ಯವನ್ನು ತುಂಬುವುದಕ್ಕೆ ಅದಕ್ಕೆ ಸರಿಸಮನಾದ ಇನ್ನೊಂದು ಉಪಸ್ಥಿತಿಯನ್ನು ಬಯಸುತ್ತಿರಬಹುದೇ...?
( ಕೆ.ವಿ.ತಿರುಮಲೇಶ್ ಅವರ ಲೇಖನದಿಂದ, ವಿಜಯ ಕರ್ನಾಟಕ-15-02-2008 )